ಮೈಸೂರು: ಅತ್ತೆ- ಮಾವ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸಿಕೊಂಡು ಬರುತ್ತಿದ್ದ ಸಂಪ್ರದಾಯವನ್ನು ಅಳಿಯನು ಸಹ ಮುಂದುವರೆಸಿ ಇತರರಿಗೆ ಮಾದರಿಯಾಗಿದ್ದಾರೆ.
ಹೌದು ಮೈಸೂರಿನ ನಿವಾಸಯಾದ ಸುಬ್ಬರಾವ್ ಹಾಗೂ ಸೀತಾರತ್ನ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ನಾನಾ ಸೇವಾ ಕಾರ್ಯಗಳ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ. ಇದನ್ನು ನೋಡಿದ ಸಾಫ್ಟ್‌ವೇರ್ ಇಂಜಿನಿಯರ್ ಅಳಿಯ ಸತೀಶ್ ಹಾಗೂ ಪತ್ನಿ ಸುಪ್ರಿತಾ ದಂಪತಿ ತಮ್ಮ 10 ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಾಮಾಜಿಕ ಕಾರ್ಯದ ಮೂಲಕ ಆಚರಿಸಿಕೊಂಡು ಮಾವ ಹಾಗೂ ಅತ್ತೆಯ ಸಂಪ್ರದಾಯ ಮುಂದುವರೆಸಿದ್ದಾರೆ.
ಸತೀಶ್ ಹಾಗೂ ಸುಪ್ರಿತಾ ದಂಪತಿಗಳು ತಮ್ಮ 10ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ಶ್ರೀರಾಂಪುರದಲ್ಲಿರುವ ಶ್ರೀ ನವಚೇತನ ಬಸವೇಶ್ವರ ಟ್ರಸ್ಟ್ ವಿಶೇಷಚೇತನರ ಶಾಲೆಗೆ ಆರು ಮೂಟೆ ಅಕ್ಕಿ, ಐದು ಸನ್ ಪ್ಯೂರ್ ಎಣ್ಣಿ ಬಾಟಲ್ ಹಾಗೂ ಒಂದು ಮೂಟೆ ಬೆಳೆ ಸೇರಿ ಇತರೆ 20 ಸಾವಿರ ರೂ. ಮೌಲ್ಯದ ದಿನಸಿ ಆಹಾರ ಪದಾರ್ಥಗಳನ್ನು ದಾನವಾಗಿ ನೀಡಿ, ಮಕ್ಕಳಿಗೆ ಸಿಹಿ ವಿತರಿಸಿದ್ದಾರೆ.
ಈ ವೇಳೆ ಮಾತನಾಡಿದ ಸಾಫ್ಟ್‌ವೇರ್ ಇಂಜಿನಿಯರ್ ಸತೀಶ್, ಮಾವ ಸುಬ್ಬರಾವ್ ಹಾಗೂ ಸೀತಾರತ್ನ ಅವರು ಸಹ ಹಿಂದೆ ಇದೇ ರೀತಿ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು. ಅದರಿಂದಲೇ ಪ್ರೇರೇಪಣೆ ಗೊಂಡು ನನ್ನ 10 ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಹೀಗೆ ಆಚರಿಸಿಕೊಂಡಿದ್ದೇನೆ. ಉಳ್ಳವರೆಲ್ಲರೂ ಸಹ ಇಂತಹ ಸಾಮಾಜಿಕ ಕಾರ್ಯಗಳ ಮೂಲಕ ತಮ್ಮ ಜನ್ಮ ದಿನ ಸೇರಿ ಎಲ್ಲಾ ಶುಭ ದಿನ ಆಚರಿಸಿ ಕೊಳ್ಳಿ ಎಂದಷ್ಟೇ ಮನವಿ ಮಾಡುತ್ತೇನೆ. ನಿಜಕ್ಕೂ ನನಗೆ ಈ ಕಾರ್ಯ ಹೆಚ್ಚು ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.
**
ನಮ್ಮ ಟ್ರಸ್ಟ್ ಗೆ ಯಾವುದೇ ಸರ್ಕಾರಿ ಹಾಗೂ ಪೋಷಕರ ಅನುದಾನ ಇಲ್ಲ. ಹೀಗಾಗಿ ಇಂತಹ ದಾನಿಗಳ ಅವಲಂಬನೆಯಿಂದಲೇ ಶಾಲೆ ನಡೆಯುತ್ತಿದೆ. ನಗದು ಇಲ್ಲದಿದ್ದರೂ ಈ ರೀತಿ ದಿನಸಿ ಆಹಾರ ಪದಾರ್ಥಗಳನ್ನು ಸಹ ನಾವು ಪಡೆದುಕೊಳ್ಳುತ್ತೇವೆ. ಒಂದಷ್ಟು ಮಕ್ಕಳಿಗೆ ಇಂತಹ ಸೇವಾಕಾರ್ಯ ಅನೂಕೂಲ ಆಗಲಿದ್ದು, ಇಂತಹವರ ಸಂಖ್ಯೆ ಹೆಚ್ಚಲಿ ಎಂದು ಕೇಳಿಕೊಳ್ಳುತ್ತೇನೆ.
ಅನುಷಾ, ಟ್ರಸ್ಟ್ ಮ್ಯಾನೇಜರ್