Saturday, 10th May 2025

Mysore Breaking: ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೆ ಸಾಂಸ್ಕೃತಿಕ ನಗರಿ ಮೈಸೂ ರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.

ನಗರದ ಜನತಾನಗರದ ಖಾಸಗಿ ಅಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದ್ದಾರೆ. ಲಕ್ಷ್ಮಿ(14) ಮೃತಪಟ್ಟ ಬಾಲಕಿ.

ಜನತಾ ನಗರದಲ್ಲಿ ವಾಸವಾಗಿರುವ ಬಾಲಕಿ ಲಕ್ಷ್ಮಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಹೋದ ತಕ್ಷಣ ಎಕ್ಸ್‌ರೇ, ಸ್ಕ್ಯಾನಿಂಗ್‌ ಏನು ಮಾಡದೆ ಏಕಾಏಕಿ ಆಪರೇಷನ್‌ ಮಾಡಿದ್ದಾರೆ. ಬಳಿಕ ಅಧಿಕ ಪ್ರಮಾಣದಲ್ಲಿ ಅನೆಸ್ತೇಶಿಯ ನೀಡಿದ ಪರಿಣಾಮ ಇಂದು ಯುವತಿ ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಬಾಲಕಿಯ ದುರ್ಮರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ ಖಾಸಗಿ ಆಸ್ಪತ್ರೆಯ ವೈದ್ಯರೇ ಕಾರಣ. ಅವರ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಪೋಷಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಮುಗಿಲು ಮುಟ್ಟಿದ ಪೋಷಕರ ಆಕ್ರಂದನ: ಯುವತಿ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಯ ಮುಂಭಾಗದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಸ್ವತಿಪುರಂ ಠಾಣಾಯಲ್ಲಿ ದೂರು ದಾಖಲಾಗಿದೆ.