Sunday, 11th May 2025

MP Sudhakar: ಸಂಸದ ಸುಧಾಕರ್‌ಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಶಾಸಕರ ಬಗ್ಗೆ ಮಾತನಾಡಲಿ- ಭರಣಿ ವೆಂಕಟೇಶ್

ನಿಲ್ಲದ ಕಾಂಗ್ರೆಸ್ ಬಿಜೆಪಿ ಆರೋಪ ಪ್ರತ್ಯಾರೋಪ : ಸವಾಲು ಪ್ರತಿ ಸವಾಲು

ಚಿಕ್ಕಬಳ್ಳಾಪುರ : ಸಂಸದ ಸುಧಾಕರ್‌(MP Sudhakar) ಗೆ ನೈತಿಕತೆ ಇದ್ದರೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆನಂತರ ಮಾತನಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಹೇಳಿದರು.

ನಗರದಲ್ಲಿ ಮಂಗಳವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸದಾ ವೈಯಕ್ತಿಕ ಟೀಕೆಗಳಿಗೆ ಇಳಿಯುವ ಬಿಜೆಪಿಯವರು ಶಾಸಕರ ತಂದೆ-ತಾಯಿ ಸಾವಿನ ಕುರಿತು ಸುದ್ದಿಗೋಷ್ಠಿ ಯಲ್ಲಿ ಟೀಕೆ ಮಾಡಿದ್ದಾರೆ. ಇವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಗುಡುಗಿದರು.

ಎಲ್ಲರೂ ವೈಯಕ್ತಿಕ ನಿಂದನೆಗಳನ್ನು ನಿಲ್ಲಿಸಬೇಕು. ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡಿ. ಯಾವುದೇ ಪಕ್ಷದವರೇ ಆಗಲಿ, ವೈಯಕ್ತಿಕ ನಿಂದನೆ ಮಾಡುವುದು ತಪ್ಪು. ವೈಯಕ್ತಿಕ ನಿಂದನೆಗಳಿಂದ ರಾಜಕಾರಣಿಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ. ಜನರಿಂದ ಅಗೌರವಕ್ಕೆ ಗುರಿಯಾಗುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.

ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡುವ ಬಿಜೆಪಿಯವರಿಗೆ ನಗರದ ಪೋಶೆಟ್ಟಿಹಳ್ಳಿ, ತೋಂಡೇನಹಳ್ಳಿ, ಮುದ್ದೇನ ಹಳ್ಳಿ, ದಿಬ್ಬೂರು ರಸ್ತೆ ಸೇರಿದಂತೆ ನಗರದ ಹಲವೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳೇ ಶಾಸಕರ ಮಾಡುತ್ತಿರುವ ಅಭಿವೃದ್ಧಿಗೆ ಸಾಕ್ಷಿ ಎಂದರು.

ಅದಷ್ಟೇ ಅಲ್ಲದೆ ೨೫ ಕೋಟಿ ವಿಶೇಷ ಅನುದಾನದ ಕ್ರಿಯಾ ಯೋಜನೆ ಸಹ ತಯಾರಿ ಹಂತದಲ್ಲಿದೆ. ಎತ್ತಿನಹೊಳೆ ಯೋಜನೆಯಡಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ೬ ಕೋಟಿ ರೂಪಾಯಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದು ನಗರ ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಎಂದು ಮಾಹಿತಿ ನೀಡಿದರು.

ಸಂಸದ ಸುಧಾಕರ್ ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರೂ ಕೂಡ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಒಂದು ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರ ಹಾಕಲಾಗಲಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಬಣದ ಮೇಲೆ ಬಡವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲಾಸ್ಪತ್ರೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯವನ್ನು ಕಲ್ಪಿಸಿದರು ಎಂದು ಕಾಲೆಳೆದರು.

ಆರ್.ಆರ್ ನಗರ ಶಾಸಕ ಮುನಿರತ್ನಂ ನಾಯ್ಡು ಅವರ ವಿಚಾರವಾಗಿ ಮಾತನಾಡಿದ ಭರಣಿ ವೆಂಕಟೇಶ್, ಹೆಣ್ಣುಮಕ್ಕಳ ಬಗ್ಗೆ  ಹೀನಾಯವಾಗಿ ಮಾತಾಡುವ ಬಿಜೆಪಿ ಶಾಸಕರನ್ನು ಆರ್.ಎಸ್.ಎಸ್ ಹೇಗೆ ಸಹಿಸಿಕೊಳ್ಳುತ್ತಿ ದೆಯೋ ಗೊತ್ತಿಲ. ಈತ ಒಕ್ಕಲಿಗರು ಎಂಬ ಕಾರಣಕ್ಕೆ ಮೂರು ಮಂದಿ ಪಾಲಿಕೆ ಸದಸ್ಯೆಯರ ಮೇಲೆ ಹಲ್ಲೆ ಮಾಡಿಸಿ, ದರ್ಪ ತೋರಿದ್ದಾರೆ. ಪ.ಜಾತಿಯವರ ಬಗ್ಗೆ ಹಗುರವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ. ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಇಲ್ಲದ ಬಿಜೆಪಿ ಈ ಇಂತಹ ವಿಚಾರಗಳ ಮೂಲಕ ಯಾವ ರೀತಿ ಸಂದೇಶ ಸಮಾಜಕ್ಕೆ ಕೊಡುತ್ತಿದೆ ಎಂಬುದನ್ನು ಅವರೇ ಹೇಳಬೇಕು ಎಂದು ಪ್ರಶ್ನಿಸಿದರು.

ಸಂವಿಧಾನಕ್ಕೆ ಅಪಚಾರ ಮಾಡಿದಂತೆ  ನಡೆದುಕೊಂಡಿರುವ ಶಾಸಕ ಮುನಿರತ್ನಂ ನಾಯ್ಡು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಇಲ್ಲವಾದರೆ ಎಸ್ಸಿ ಮತ್ತು ಒಕ್ಕಲಿಗ ಸಮುದಾಯಗಳು ಮುಂದಿನ ದಿನಗಳಲ್ಲಿ ಕಾನೂನು ಹೋರಾಟದ ಮೂಲಕ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಜಯರಾಮ್ ಮಾತನಾಡಿ, ಸಂಸದರು ಬೆಂಗಳೂರಿನ ಏಸ್ ಮೈಕ್ರೋಮ್ಯಾಟಿಕ್ ಸಮೂಹ ಸಂಸ್ಥೆಯು ಕುಪ್ಪಳ್ಳಿ ಗ್ರಾಪಂ ವ್ಯಾಪ್ತಿಯ ಕುಡುವತಿ ಗ್ರಾಮದ ಸರಕಾರಿ ಶಾಲೆಗೆ ಕೊಠಡಿ, ಶೌಚಾಲಯ ನಿರ್ಮಿಸಿಕೊಟ್ಟಿದ್ದು, ಸಂಸದರ ನೇತೃತ್ವದಲ್ಲಿ ಉದ್ಘಾಟನೆಯಾಗಬೇಕು ಎಂಬ ಕಾರಣಕ್ಕೆ, ಕೊಠಡಿ ಉದ್ಘಾಟನೆ ಮಾಡದಂತೆ ಅಡ್ಡಿಪಡಿಸುವ ಮೂಲಕ ತಮ್ಮ ವ್ಯಕ್ತಿತ್ವ ಏನೆಂಬುದನ್ನು ಪ್ರದರ್ಶಿಸಿದ್ದಾರೆ. ಆದರೆ, ನಮ್ಮ ಶಾಸಕರು ಆ ರೀತಿ ಮಾಡದೇ ಉದ್ಘಾಟನೆಗೆ ಅನುವು ಮಾಡಿಕೊಟ್ಟಿದ್ದಾರೆ. ಇದು ಶಾಸಕರ ದೊಡ್ಡ ಗುಣ. ಬಿಜೆಪಿಯವರು ವೈಯಕ್ತಿಕ ನಿಂದನೆಗಳನ್ನು ಬಿಟ್ಟು ಅಭಿವೃದ್ಧಿ ವಿಚಾರವಾಗಿ ಮಾತಾಡಲಿ, ನಾವೂ ಹಾಗೇ  ಮಾತಾಡುತ್ತೇವೆ ಎಂದರು.  

ಸುದ್ದಿಗೋಷ್ಠಿಯಲ್ಲಿ ಅಡ್ಡಗಲ್ ಶ್ರೀಧರ್, ಯಲುವಹಳ್ಳಿ ಜನಾರ್ಧನ್, ಆವಲರೆಡ್ಡಿ, ಲಕ್ಷ್ಮಣ್ ಹಾಗೂ ಇತರರಿದ್ದರು.

ಇದನ್ನೂ ಓದಿ: MP Dr K Sudhakar: ಎಲ್ಲರೂ ಪಕ್ಷವನ್ನು ಅನುಸರಿಸಿ, ಪಕ್ಷದ ಯಾವುದೇ ಘಟಕದ ಅಧ್ಯಕ್ಷರ ಆದೇಶವನ್ನು ಪಾಲಿಸಿ

Leave a Reply

Your email address will not be published. Required fields are marked *