ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ನಮ್ಮ ಸಂಘಟನೆ ಮತ್ತು ನನ್ನ ಹೆಸರು ಪ್ರಸ್ತಾಪಿಸಿರುವ ಟಿ.ಎನ್.ಅಂಜಿನಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದರು.
ಇತ್ತೀಚೆಗೆ ಅಂಜಿನಪ್ಪ ಮತ್ತು ನಾಗರಾಜ್ ಅವರು ಜಮೀನಿನ ಖಾತೆ ಬದಲಾವಣೆ, ಜಮೀನು ವಿಭಾಗದ ವಿಚಾರವಾಗಿ ನಮ್ಮ ರೈತ ಸಂಘದ ಮುಖಂಡರು ಲಕ್ಷಾಂತರ ರೂಪಾಯಿ ಪಡೆದಿದ್ದಾರೆ. ಜಮೀನು ಕಬಳಿಸಿ ಮೋಸ ಮಾಡಿದ್ದಾರೆ ಎಂದು ಹೇಳಿ ದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದುದು ಎಂದು ಹೇಳಿದರು.
ಕೊತ್ತಕೋಟೆ ಗ್ರಾಮದ ಸರ್ವೆ ೬ರ ತಮ್ಮ ಜಮೀನನ್ನು ಲಕ್ಷ್ಮಿನಾರಾಯಣರೆಡ್ಡಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಅಂಜಿನಪ್ಪ ದೂರಿದ್ದಾರೆ. ಪಹಣಿಯಲ್ಲಿ ಸರ್ವೆ ನಂ ೬ ಜಮೀನು ತೋಟಿ ಇನಾಮಿತಿ ಎಂದಿದೆ. ಅದು ಸರ್ಕಾರಕ್ಕೆ ಸೇರಿದೆ. ಈ ವಿಚಾರವಾಗಿ ನನ್ನ ಮೇಲೆ ಸುಳ್ಳು ಆಪಾದನೆ ಮಾಡಿದ್ದಾರೆ ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕುಬ್ ಷರೀಫ್ ಮಾತನಾಡಿ, ರೈತ ಸಂಘದ ಬಾಗೇಪಲ್ಲಿ ತಾಲ್ಲೂಕು ಸಂಚಾಲಕ ರಾಮಾಂಜಿನಪ್ಪ ಹಾಗೂ ಮುಷ್ಟೂರಿನ ನಾಗರಾಜ್ ಅವರು ಸಂಬ0ಧಿಕರು. ಕುಟುಂಬದ ವಿವಾದದಲ್ಲಿ ರೈತ ಸಂಘವನ್ನು ಎಳೆ ತರುತ್ತಿದ್ದಾರೆ ಎಂದು ಹೇಳಿದರು.
ರೈತ ಸಂಘದ ಬಾಗೇಪಲ್ಲಿ ತಾಲ್ಲೂಕು ಸಂಚಾಲಕ ರಾಮಾಂಜಿನಪ್ಪ ಮಾತನಾಡಿ, ದಾನಪತ್ರದ ಮೂಲಕ ಸಕ್ರಮವಾಗಿಯೇ ಜಮೀನು ಪಡೆದಿದ್ದೇವೆ. ಯಾವುದೇ ಮೋಸ ಮಾಡಿಲ್ಲ. ಆದರೆ ರೈತರ ಸಂಘಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಮುನಿರಾಜಪ್ಪ, ಅನುಷಾ, ವೆಂಕಟಲಕ್ಷಮ್ಮ, ಅಕ್ಷಯ್ ಕುಮಾರ್, ಅನಿತಾ, ಗ್ರಾ.ಪಂ ಸದಸ್ಯ ಶಶಿ ಗೋಷ್ಠಿಯಲ್ಲಿ ಇದ್ದರು.