ಚಿಕ್ಕಬಳ್ಳಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ನಗರದ ಜಿಲ್ಲಾ ಬಯಲು ರಂಗಮ0ದಿರದ ಮುಂಭಾಗ ಬೆಳಗ್ಗೆ ಕನ್ನಡ ಧ್ವಜಾರೋಹಣ ಮಾಡಿ ಮತನಾಡಿದ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ,ಕನ್ನಡ ಭಾಷೆಯು ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ.
ಇತಿಹಾಸಕಾರರ ಪ್ರಕಾರ ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಪ್ರಾಚೀನತೆಯಿದೆ,ಅಶೋಕನ ಕಾಲದಲ್ಲೂ ಕನ್ನಡ ಭಾಷೆ ಇದ್ದುದಕ್ಕೆ ಉಲ್ಲೇಖಗಳಿವೆ. ಭಾಷೆ ಬೆಳೆಯಬೇಕಾದರೆ ಜನರು ಅದನ್ನು ಬಳಸಿದಾಗ ಮಾತ್ರ ಸಾಧ್ಯ ಎಂದರು.
ತಾಲ್ಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಕನ್ನಡಿಗರಿಗೆ ಉದ್ಯೋಗ ಸಿಕ್ಕಿ, ಕನ್ನಡ ಅನ್ನದ ಭಾಷೆಯಾಗ ಬೇಕಾದರೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರವು ಜಾರಿ ಮಾಡಲು ಇಚ್ಚಾಶಕ್ತಿ ತೋರಬೇಕು.ಅಖಂಡ ಕರ್ನಾಟಕದ ಕನಸು ಸಾಕಾರಗೊಳ್ಳಲು, ಮಹಾಜನ ವರದಿ ಅನುಷ್ಠಾನಕ್ಕೆ ಬರಬೇಕು.
ಅಚ್ಚ ಕನ್ನಡದ ಪ್ರಾಂತ್ಯಗಳಾದ ಅಕ್ಕಲಕೋಟೆ, ಜತ್ತ, ಸಾಂಗ್ಲಿ, ಮಡಕಸಿರ, ಮಂತ್ರಾಲಯ, ಕಾಸರಗೋಡು, ತಳ್ಳಿ, ತಾಳವಾಡಿ ಮುಂತಾದ ಪ್ರದೇಶಗಳು ರಾಜ್ಯಕ್ಕೆ ಸೇರಬೇಕೆಂದರು.
ಸಂದರ್ಭದಲ್ಲಿ ಜಿಲ್ಲಾ ಕೋಶಾಧ್ಯಕ್ಷ ಚನ್ನ ಮಲ್ಲಿಕಾರ್ಜುನ್, ತಾಲ್ಲೂಕು ಕಾರ್ಯದರ್ಶಿ ಗೋಪಾಲಗೌಡ ಕಲ್ವಮಂಜಲಿ, ಚಲಪತಿಗೌಡ, ಉಮಾಶಂಕರ್, ಶ್ರೀರಾಮ, ಡಾ.ಶಂಕರ್, ಮಹಂತೇಶ್ ಶಶಿಧರ್, ಸುಶಿಲಾ ಮಂಜುನಾಥ್, ಅಣ್ಣಮ್ಮ ಸರಸಮ್ಮ, ಪ್ರೇಮಲೀಲಾ ವೆಂಕಟೇಶ್, ಕಲಾನಾಗರಾಜ್, ಮಂಜುಳಮ್ಮ ಇತರರು ಹಾಜರಿದ್ದರು.