Sunday, 11th May 2025

Karnataka by election: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮುಹೂರ್ತ ಫಿಕ್ಸ್‌; ನ.13ಕ್ಕೆ ಮತದಾನ, ನ.23ಕ್ಕೆ ಫಲಿತಾಂಶ

Karnataka by election

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (Karnataka by election) ಮುಹೂರ್ತ ಫಿಕ್ಸ್‌ ಆಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ನ.13 ರಂದು ಉಪ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಚುನಾವಣಾ ಆಯೋಗವು ಅ.18ರಂದು ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಅ.25 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅ.28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅ.30 ಕಡೆಯ ದಿನವಾಗಿದೆ. ಕರ್ನಾಟಕ ಮೂರು ಕ್ಷೇತ್ರಗಳಾದ ಶಿಗ್ಗಾವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ನವೆಂಬರ್‌ 13ರಂದು ಮತದಾನ ನಡೆಯಲಿದ್ದು, ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದೇ ರೀತಿ ಚನ್ನಪಟ್ಟಣದ ಜೆಡಿಎಸ್ ಶಾಸಕ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಗೆದ್ದು ಕೇಂದ್ರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿದ್ದಾರೆ. ಇನ್ನು ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಈ ತುಕಾರಾಂ ಅವರು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರಿಂದ ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಮೂವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ.