Sunday, 11th May 2025

Kannada Rajyotsava: ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ: ಅದ್ದೂರಿ ಆಚರಣೆಗೆ ನಾಗರೀಕರ ಸಹಕಾರಕ್ಕೆ ಮನವಿ

ಗುಬ್ಬಿ: ಪ್ರತಿ ವರ್ಷದಂತೆ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಗುಬ್ಬಿ ನಾಗರೀಕರ ಸಹಕಾರ ಅತ್ಯಗತ್ಯ ಎಂದು ತಹಶೀಲ್ದಾರ್ ಬಿ.ಆರತಿ ಮನವಿ ಮಾಡಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೈಭವಯುತ ಆಚರಣೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಶಿಷ್ಟಾಚಾರ ಅನುಸಾರವಾಗಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿ ವರ್ಷದಂತೆ ವೇದಿಕೆ ನಿರ್ಮಿಸಿ ರಾಷ್ಟ್ರಧ್ವಜ ಹಾಗೂ ನಾಡ ಧ್ವಜ ಹಾರಿಸುವ ಮೂಲಕ ಅರ್ಥಪೂರ್ಣ ದಿನಾಚರಣೆ ಆಚರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪೊಲೀಸರು, ಗೃಹರಕ್ಷಕ ದಳ, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ಸ್, ಮಾಜಿ ಸೈನಿಕರು ಹಾಗೂ ಶಾಲಾ ಮಕ್ಕಳು ಆಕರ್ಷಕ ಕವಾಯತು ನಡೆಸಲಾಗುವುದು. ಮೂಲಭೂತ ಸೌಕರ್ಯಗಳಾದ ನೀರು, ನೆರಳು ವ್ಯವಸ್ಥೆ ಹಾಗೂ ಸಿಹಿ ಉಪಹಾರ ಹಂಚಿಕೆ, ಕನ್ನಡ ಧ್ವಜ, ಶಾಲು, ಶಲ್ಯ ಹಂ ಹಾಗೂ ಕಾರ್ಯಕ್ರಮದ ಪೋಟೋ ವಿಡಿಯೋ ಚಿತ್ರೀಕರಣ ಹೀಗೆ ಅನೇಕ ಜವಾಬ್ದಾರಿಯನ್ನು ಇಲಾಖೆವಾರು ಹಂಚಲಾಗುವುದು ಎಂದು ತಿಳಿಸಿದ ಅವರು ಈ ಸರ್ಕಾರಿ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಖುದ್ದು ಹಾಜರಾಗಿ ಕಾರ್ಯಕ್ರಮ ಯಶಸ್ವಿ ಗೊಳಿಸ ಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆಗೆ 9 ಕ್ಷೇತ್ರಗಳಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುವುದು. ಶಿಕ್ಷಣ, ಕೃಷಿ, ಪರಿಸರ, ವೈದ್ಯಕೀಯ, ರಂಗಭೂಮಿ, ಸಾಹಿತ್ಯ, ಜನಪದ, ಸಮಾಜ ಸೇವೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಆಯ್ಕೆ ಮಾಡಿ ಸನ್ಮಾನಿಸಿ ಪ್ರಶಸ್ತಿ ನೀಡಲಾಗುವುದು. ಸಾಧನೆ ಮಾಡಿದ ಗಣ್ಯರು ಇದೇ ತಿಂಗಳ 25 ರೊಳಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿ ರಚಿಸಲಾಗಿದ್ದು ತಾಲ್ಲೂಕು ಪಂಚಾಯಿತಿ ಇಓ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಯತೀಶ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಹಾಜರಿದ್ದರು.

ಇದನ್ನೂ ಓದಿ: Gubbi: ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ತಾಲೂಕು ಅಧ್ಯಕ್ಷರಾಗಿ ಮಂಚಲದೊರೆ ರಮೇಶ್ ಆಯ್ಕೆ