Monday, 12th May 2025

ಪ್ರಾದೇಶಿಕ ಪಕ್ಷದಿಂದ ಮಾತ್ರವೇ ರಾಜ್ಯದ ಅಭಿವೃದ್ದಿ ಸಾಧ್ಯ: ಜೆ.ಕೆ.ಕೃಷ್ಣಾರೆಡ್ಡಿ

ಚಿಕ್ಕಬಳ್ಳಾಪುರ : ಪ್ರಾದೇಶಿಕ ಪಕ್ಷದಿಂದ ಮಾತ್ರವೇ ರಾಜ್ಯದ ಹಿತ ಕಾಪಾಡಿ ತನ್ಮೂಲಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎಂಬುದನ್ನು ಜನತೆ ಅರಿತು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ರಾಷ್ಟ್ರೀಯ ಪಕ್ಷಗಳಿಗೆ ನೀಡಿದಂತೆ ಒಮ್ಮೆ ಪೂರ್ಣಾವಧಿ ಅಧಿಕಾರ ನೀಡಿ ಆಶೀರ್ವದಿಸಿ ದರೆ ಪಂಚರತ್ನ ಯೋಜನೆ ಸಾಕಾರವಾಗಲಿದೆ ಎಂದು ಮಾಜಿ ವಿಧಾನ ಸಭೆಯ ಉಪಸಭಾಪತಿ ಜೆ.ಕೆ.ಕೃಷ್ಣಾರೆಡ್ಡಿ ಜನತೆಯಲ್ಲಿ ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಪಕ್ಷಗಳ ಅಧಿಕಾರ ಲಾಲಸೆ, ರಾಜ್ಯದ ಪರವಾಗಿ ಗಟ್ಟಿಯಾಗಿ ದನಿಯೆತ್ತದಿರುವ ನಿಷ್ಕಿçಯತೆ, ಭ್ರಷ್ಟಾಚಾರ, ಜನವಿರೋಧಿ ನೀತಿ, ನೆಲ, ಜಲ, ಗಡಿ, ಉದ್ಯೋಗ ಮೊದಲಾದ ವಿಚಾರಗಳಲ್ಲಿ ರಾಜ್ಯಕ್ಕೆ ಮಾಡಿರುವ ಮೋಸ ವಂಚನೆಗಳನ್ನು ರಥಯಾತ್ರೆಯ ವೇಳೆ ಜನತೆಯ ಮುಂದಿಡುವ ಕೆಲಸ ಮಾಡುತ್ತೇವೆ. ಕುಮಾರಸ್ವಾಮಿ ಒಮ್ಮೆ ಪೂರ್ಣಾವಧಿ ಮುಖ್ಯಮಂತ್ರಿಯಾಗಬೇಕೆ೦ದು ರಾಜ್ಯದ ಜನತೆ ಬಯಸಿರುವುದು ರಥಯಾತ್ರೆಯ ವೇಳೆ ಬಹಿರಂಗವಾಗಿದೆ. ಜಿಲ್ಲೆಯಲ್ಲಿ ಕೂಡ ಪಕ್ಷದ ಪರವಾದ ಅಲೆಯಿದ್ದು ಕುಮಾರಸ್ವಾಮಿ ಅವರ ಆಗಮನ ಕಾರ್ಯಕರ್ತರಿಗೆ ಬಲ ತುಂಬಲಿದೆ ಎಂದರು.

ಜಿಲ್ಲೆಯಲ್ಲಿ ನಡೆಯುವ ಬಹಿರಂಗ ಸಭೆಗಳಲ್ಲಿ ೧೦ ರಿಂದ ೧೫ ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸುವಂತೆ ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ವೀಕ್ಷಕರ ಗಮನಕ್ಕೂ ತರಲಾಗಿದೆ.

ಕೆ.ಪಿ.ಬಚ್ಚೇಗೌಡ ಮಾತನಾಡಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಂಚೇನಹಳ್ಳಿ, ಪೋಶೆಟ್ಟಹಳ್ಳಿ,ಮುಷ್ಟೂರು,ಪೆರೇಸಂದ್ರ, ನಂದಿ,ನಾಯನಹಳ್ಳಿಯಲ್ಲಿ ಸಭೆಯನ್ನುದ್ದೇಶಿಸಿ ಕುಮಾರಸ್ವಾಮಿ ಮಾತನಾಡಲಿದ್ದಾರೆ.

ಪಂಚರತ್ನ ಎಂಬುದು ಕೇವಲ ಯೋಜನೆಯಲ್ಲ,ರಾಜ್ಯದ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲ ದೂರದೃಷ್ಟಿ ಯಾಗಿದೆ. ಜಿಲ್ಲೆಯಲ್ಲಿ ೫ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಲಿದ್ದಾರೆ ಎಂದರು.

ವೀಕ್ಷಕ ಬೆಳ್ಳಿ ಲೋಕೇಶ್ ಮಾತನಾಡಿ ರಾಜ್ಯದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿದ ಜೆಡಿಎಸ್ ಪಕ್ಷವು ಮುಂದಿನ ಚುನಾವಣೆ ಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಖಚಿತ.ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತ ಭ್ರಷ್ಟಾಚಾರವನ್ನು ಜನತೆ ಕಂಡಿದ್ದಾರೆ.

ಸಿದ್ದರಾಮಯ್ಯ ಹೇಳುವಂತೆ ಜೆಡಿಎಸ್ ಬಿಜೆಪಿಯ ಬಿಟೀಮ್ ಅಲ್ಲ. ೧೩ ಮಂದಿಯನ್ನು ಬಿಜೆಪಿಗೆ ಕಳಿಸಿ ಸಮ್ಮಿಶ್ರ ಸರಕಾರಕ್ಕೆ ಬೀಳಿಸಿ ಬಿಜೆಪಿ ಅಧಿಕಾರಕ್ಕೆ ತಂದ ಕಾಂಗ್ರೆಸ್ ಆಗಿದೆ. ಜಿಲ್ಲೆಯಲ್ಲಿ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರುವ ನಂಬಿಕೆಯಿದ್ದು ಮತದಾರರು ನಮ್ಮ ಪಕ್ಷಕ್ಕೆ ಮತಚಲಾಯಿಸುವರು ಎಂದರು.

ಜಿಲ್ಲಾ ಪ್ರವಾಸ ಮಾಹಿತಿ:  ಪಂಚರತ್ನ ರಥಯಾತ್ರೆಯನ್ನು ಮೂಡಲಬಾಗಿಲು ಪುಣ್ಯಕ್ಷೇತ್ರದಿಂದ ಪ್ರಾರಂಭಿಸಲಾಗಿದ್ದು ನವೆಂಬರ್ ೨೩ಕ್ಕೆ ಜಿಲ್ಲೆಯನ್ನು ಪ್ರವೇಶಿಸಲಿದೆ.ಚಿಂತಾಮಣಿ ಬರುವ ರಥಯಾತ್ರೆಯನ್ನು ಕೈವಾರ ತಾತಯ್ಯ ಅವರ ಸನ್ನಿಧಾನದಲ್ಲಿ ವಿಶೇಷವಾದ ಪೂಜೆಯನ್ನು ಮಾಡುವ ಮೂಲಕ ತಾಲೂಕಿನಲ್ಲಿ ಸಂಚಾರಕ್ಕೆ ಅವಕಾಶ  ಮಾಡಿಕೊಡ ಲಾಗುವುದು. ಅದರಂತೆ ೨೪ರಂದು ಶಿಡ್ಲಘಟ್ಟ,೨೫ರಂದು ಬಾಗೇಪಲ್ಲಿ,೨೬ರಂದು ಗೌರಿಬಿದನೂರು,೨೭ರಂದು ಚಿಕ್ಕಬಳ್ಳಾಪುರಕ್ಕೆ ರಥಯಾತ್ರೆ ಬರಲಿದೆ.

ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ,ವೀಕ್ಷಕರಾದ ಬೆಳ್ಳಿ ಲೋಕೇಶ್, ಕವಿತಾರೆಡ್ಡಿ,ಹರೀಶ್‌ಗೌಡ,ನರಸಿಂಹಮೂರ್ತಿ, ಅಜ್ಜವಾರ ರೆಡ್ಡಿ, ವರುಣ್, ಸ್ವರೂಪ್, ಮುನಿಯಪ್ಪ ಮತ್ತಿತರರು ಇದ್ದರು.