Sunday, 11th May 2025

ತುಮಕೂರಿನಲ್ಲಿ ಇಸ್ರೋ ಚಟುವಟಿಕೆಗಳು ಏಪ್ರಿಲ್ ವೇಳೆಗೆ ಕಾರ್ಯಾರಂಭ: ಮಾಜಿ ಸಂಸದ ಮುದ್ದಹನುಮೇಗೌಡ 

ತುಮಕೂರು: ನಗರದಲ್ಲಿರುವ ಇಸ್ರೋ ಸಂಸ್ಥೆಯ  ಉತ್ಪಾದನಾ ಚಟುವಟಿಕೆಗಳು  ಮುಂದಿನ ಏಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡಲಿದೆಯೆಂದು ಮಾಜಿ ಸಂಸದ ಮುದ್ದಹನುಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಎಚ್‌ಎಂಟಿ ಕಾರ್ಖಾನೆ ಮುಚ್ಚಿದ ನಂತರ 120 ಎಕರೆ ಜಾಗವನ್ನು ಇಸ್ರೋ ಸಂಸ್ಥೆಗೆ ನೀಡಲಾಗಿತ್ತು. ನಾನು ಸಂಸದನಾಗಿದ್ದಾಗ 2019 ಫೆ. 9ರಂದು ಅಂದಿನ ಇಸ್ರೋ ಅಧ್ಯಕ್ಷರ ಜತೆಯಲ್ಲಿ ಘಟಕಕ್ಕೆ ಭೂಮಿಪೂಜೆ ನೆರವೇರಿಸ ಲಾಗಿತ್ತು. ಕಾಮಗಾರಿ ನಿಧಾನವಾಗಿದ್ದರೂ ಮೊದಲ ಹಂತದ ಕೆಲಸ ಪೂರ್ಣಗೊಂಡಿದೆ ಎಂದರು.
120 ಎಕರೆಯಲ್ಲಿ ಸ್ವಲ್ಪ ಜಾಗವನ್ನು ಮಾತ್ರ ಬಳಸಿಕೊಂಡು ಪ್ರೊಫುಲೆಂಟ್ ಟ್ಯಾಂಕರ್‌ಗಳ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ಚಟುವಟಿಕೆಗಳು ಆರಂಭವಾಗಲಿವೆ. ಮೊದಲ ಹಂತದಲ್ಲಿ ಉಪಗ್ರಹಗಳ ಉಡಾವಣೆಗೆ ಬಳಸುವ ಪ್ರೊಫುಲೆಂಟ್ ಟ್ಯಾಂಕರ್‌ಗಳ ಉತ್ಪಾದನಾ ಕಾರ್ಯ ಆರಂಭವಾಗಲಿದೆ. ಟ್ಯಾಂಕರ್‌ಗಳನ್ನು ಈವರೆಗೆ ಆಮದು ಮಾಡಿಕೊಳ್ಳುತ್ತಿದ್ದು, ಇನ್ನು ಮುಂದೆ ತುಮಕೂರಿನ ಘಟಕದಲ್ಲಿ ಉತ್ಪಾದನೆ ಮಾಡುವ ಮೂಲಕ ಸ್ವಾವಲಂಬನೆ ಸಾಧಿಸಲಿದೆ ಎಂದು ತಿಳಿಸಿದರು.
ಲೋಕಸಭೆಗೆ ಬಿಜೆಪಿಯಿಂದ ಕಣಕ್ಕೆ 
ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದಲೇ ಟಿಕೆಟ್ ಸಿಗುವ ವಿಶ್ವಾಸ ಇದೆ. ಸದ್ಯಕ್ಕೆ ಬಿಜೆಪಿಯಲ್ಲೇ ಇದ್ದೇನೆ.  ಪಕ್ಷಕ್ಕೆ ಬರುವಂತೆ ಕಾಂಗ್ರೆಸ್ ನಾಯಕರು ಆಹ್ವಾನಿಸಿಲ್ಲ, ಯಾರೂ ಸಂಪರ್ಕ ಮಾಡಿಲ್ಲ. ಜಾತಿ, ಪಕ್ಷವನ್ನು ಮೀರಿ ನಾನು ಸ್ಪರ್ಧೆ ಮಾಡಬೇಕು ಎಂಬ ಬಯಕೆಯನ್ನು ಜಿಲ್ಲೆಯ ಜನರು ವ್ಯಕ್ತಪಡಿಸುತ್ತಿದ್ದಾರೆ. ಸ್ಪರ್ಧಿಸಲೇಬೇಕೆಂದು ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *