Sunday, 11th May 2025

Honey Trap Case: ಹನಿಟ್ರ್ಯಾಪ್ ಪ್ರಕರಣ; ಆರೋಪಿ ಮಂಜುಳಾ ಮೊಬೈಲ್‌ನಲ್ಲಿ 8 ರಾಜಕಾರಣಿಗಳ ಖಾಸಗಿ ವಿಡಿಯೊ ಪತ್ತೆ!

ಬೆಂಗಳೂರು: ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರನ್ನು ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್‌ಮೇಲ್ (Honey Trap Case) ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇದೀಗ ಪ್ರಕರಣದ ಆರೋಪಿ, ಕಾಂಗ್ರೆಸ್‌ ನಾಯಕಿ ಮಂಜುಳಾ ಪಾಟೀಲ್‌ ಮೊಬೈಲ್‌ನಲ್ಲಿ 8 ರಾಜಕಾರಣಿಗಳ ಖಾಸಗಿ ವಿಡಿಯೊ ಪತ್ತೆಯಾಗಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಮಂಜುಳಾ ಪಾಟೀಲ್ ಮತ್ತು ಆಕೆಯ ಪತಿ ಶಿವರಾಜ್ ಪಾಟೀಲ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹಲವು ಸಮಯದಿಂದ ಕಾಂಗ್ರೆಸ್ ಸದಸ್ಯೆಯಾಗಿದ್ದ ಮಂಜುಳಾ ಅವರು ಗುತ್ತೇದಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು ಮತ್ತು ಅವರ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ್ದರು. ವಿಚಾರಣೆ ವೇಳೆ ಆಕೆಯ ಫೋನ್‌ನಲ್ಲಿ ದೊರೆತ ಮಾಹಿತಿಯಿಂದ ಆಕೆ ಹಲವಾರು ವ್ಯಕ್ತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ‌ ಎಂದು ತಿಳಿದುಬಂದಿದೆ. ಮಂಜುಳಾ ಪಾಟೀಲ್‌ ಮೊಬೈಲ್‌ನಲ್ಲಿ 8 ರಾಜಕಾರಣಿಗಳ ಖಾಸಗಿ ವಿಡಿಯೋ ಪತ್ತೆಯಾಗಿದೆ ಎನ್ನಲಾಗಿದೆ.

ಅ. 21ರಂದು ಗುತ್ತೇದಾರ್ ಅವರ ಪುತ್ರ ರಿತೇಶ್ ಅವರನ್ನು ಸಂಪರ್ಕಿಸಿದ ಮಂಜುಳಾ, ತಂದೆ ತನಗೆ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದರು. ಸ್ವಾತಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ನಡೆದ ನಂತರದ ಸಭೆಯಲ್ಲಿ, ಕಾನೂನು ಕ್ರಮವನ್ನು ತಡೆಗಟ್ಟಲು ಮತ್ತು ವೀಡಿಯೊಗಳನ್ನು ಖಾಸಗಿಯಾಗಿಡಲು ಅವರು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ದಂಪತಿ ಅ. 23 ಮತ್ತು 24 ರಂದು ವಾಟ್ಸ್‌ ಆ್ಯಪ್ ಕರೆಗಳ ಮೂಲಕ ರಿತೇಶ್‌ಗೆ ಪದೇ ಪದೇ ಕಿರುಕುಳ ನೀಡುತ್ತಿದ್ದರು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಗರುಡ ಮಾಲ್ ಬಳಿ ಹಣ ಪಡೆಯುತ್ತಿದ್ದಾಗ ದಂಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಇತರ ಅಧಿಕಾರಿಗಳು ಸೇರಿದಂತೆ ಎಂಟು ವ್ಯಕ್ತಿಗಳ ಖಾಸಗಿ ವಿಡಿಯೊಗಳು ಮಂಜುಳಾ ಮೊಬೈಲ್‌ನಲ್ಲಿ ಇವೆ ಎನ್ನಲಾಗಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Viral Video: 10 ಸೆಕೆಂಡ್‌ ರೀಲ್ಸ್‌ಗಾಗಿ ಅಮೂಲ್ಯ ಜೀವ ಕಳೆದುಕೊಂಡ ಬಾಲಕ; ವಿಡಿಯೊ ನೋಡಿ