ಜಿಲ್ಲೆಯಲ್ಲೂ ಅಬ್ಬರಿಸಿದ ಫೆಂಗಲ್ ಚಂಡಮಾರುತ: ಧರೆಗುರುಳಿದ ಮರ
ಮುಂಗಾರು ಹಂಗಾಮು ರಾಗಿ ಬೆಳೆಗೆ ಕಂಟಕ : ಹಿಂಗಾರು ಬೆಳೆಗೆ ವರದಾನ
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ : ನೈರುತ್ಯ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಫೆಂಗಲ್ ಚಂಡಮಾರುತದ ಅಬ್ಬರ ಜಿಲ್ಲೆಯಲ್ಲೂ ಜೋರಾಗಿದ್ದು ಕಳೆದ ಎರಡು ದಿನಗಳಿಂದ ಬಿಟ್ಟೂಬಿಡದಂತೆ ಶೀತಗಾಳಿ ಜಿಟಿಜಿಟಿ ಮಳೆ ಬೀಳುತ್ತಿರುವ ಪರಿಣಾಮವಾಗಿ ಜನಜೀವನದ ಮೇಲಷ್ಟೇ ಅಲ್ಲದೆ ಜಾನುವಾರುಗಳ ಬದುಕಿಗೂ ಸಂಚಕಾರ ತಂದಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ ಹೆಚ್ಚಾಗಿ ನೆಗಡಿ ಕೆಮ್ಮು ಜ್ವರ, ಗಂಟಲು ನೋವು ಮೈಕೈನೋವು ತರದ ಅನಾರೋಗ್ಯವನ್ನು ತಂದಿದೆ.

ಹೌದು ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತ ಪ್ರವೇಶಕ್ಕೂ ಮೊದಲೇ ಶೀತಗಾಳಿ ಸಹಿತ ತುಂತುರು ಮಳೆಯ ವಾತಾವರಣ ನಿರ್ಮಾಣವಾಗಿತ್ತು.ಇದಕ್ಕೆ ಪುಷ್ಟಿನೀಡುವಂತೆ ಬಂದ ಫೆಂಗಲ್ ಹಿಂಗಾರು ಮಳೆಯ ಪರಿಣಾಮವನ್ನು ಉಂಟು ಮಾಡಿದೆ.ಇದನ್ನು ಮನಗಂಡೇ ಜಿಲ್ಲಾಡಳಿತ ಸೋಮವಾರ ಮಂಗಳವಾರ ಎರಡು ದಿನದ ರಜೆಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಧರೆಗುರುಳಿದ ವೃಕ್ಷ

ಫೆಂಗಲ್ ಅಬ್ಬರ ಹೇಗಿದೆ ಎನ್ನುವುದಕ್ಕೆ ಜಿಲ್ಲಾಧಿಕಾರಿ ನಿವಾಸಕ್ಕೆ ತೆರಳು ಮಾರ್ಗದಲ್ಲಿದ್ದ ಬೃಹತ್ ಕತ್ತಿಮರವೊಂದು ಧರೆಗುರುಳಿ ಕೆಲ ಕಾಲ ಆತಂಕವನ್ನು ಸೃಷ್ಟಿಸಿದ್ದೇ ಸಾಕ್ಷಿ.ಶಾಲಾ ಕಾಲೇಜುಗಳಿಗೆ ರಜೆಯಿದ್ದ ಕಾರಣ ಜನಸಂಚಾರವೂ ಕಡಿಮೆಯಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಇಲ್ಲದಿದ್ದರೆ ಭಾರೀ ಅನಾಹುತ ಆಗುತ್ತಿತ್ತು ಎನ್ನುವುದು ಈ ಭಾಗದ ನಿವಾಸಿಗಳ ಮಾತಾಗಿದ್ದು ಸಕಾಲಕ್ಕೆ ಬಂದ ನಗರಸಭೆ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮುಂಗಾರು ಬಿತ್ತನೆಗೆ ಕಂಠಕ
ಜಿಲ್ಲೆಯಲ್ಲಿ ೪೨೬೭೩ ಹೆಕ್ಟೇರ್ ಪ್ರದೇಶದಲ್ಲಿ ರಾಗಿಯನ್ನು ಬಿತ್ತನೆ ಮಾಡಲಾಗಿದ್ದು ಮುಂಗಾರು ಅವಧಿಯ ಬೆಳೆ ಕಟಾವಿಗೆ ಬಂದಿತ್ತು.ಕೆಲವರು ಕಟಾವು ಮಾಡಿದ್ದರೆ ಹಲವರು ಬಿಸಿಲ ವಾತಾವರಣಕ್ಕೆ ಕಾದಿದ್ದರು.ಈ ನಡುವೆ ಕರೆಯದ ಅತಿಥಿಯಂತೆ ಬಂದಿರುವ ಫೆಂಗಲ್ ಚಂಡಮಾರುತವು ಹೊಟ್ಟೆಬಟ್ಟೆಕಟ್ಟಿ, ಸಾವಿರಾರು ರೂಪಾಯಿ ಖರ್ಚು ಮಾಡಿ ವರ್ಷಕ್ಕಾಗುವಷ್ಟು ಧವಸಧಾನ್ಯ ಮನೆತುಂಬಿಸಿಕೊಳ್ಳುವ ಭರವಸೆಯಿಟ್ಟು ಬೆಳೆದಿದ್ದ ರಾಗಿ ಒಂದೆರಡು ದಿನಗಳಲ್ಲಿ ಸುರಿದ ಅಕಾಲಿಕ ಮಳೆಗೆ ಸಿಕ್ಕು ನಾಶವಾಗುವ ಸ್ಥಿತಿ ತಲುಪಿದೆ.ಕಟಾವ ಮಾಡಿರುವ ತೆನೆಗೆ ನೀರು ನಿಗ್ಗಿದರೆ ಮೊಳಕೆ ಬರುವ ಅಪಾಯವಿದೆ.ಕಟಾವಾಗದೆ ಹೊಲದಲ್ಲೇ ಇರುವ ರಾಗಿ ನೆಲಕ್ಕೆ ಉದುರಿ ಮಣ್ಣು ಪಾಲಾಗುವ ಪರಿಸ್ಥಿತಿಯಿದೆ.ಹೀಗಾಗಿ ರಾಗಿ ಬೆಳೆದ ರೈತರ ಪಾಲಿಗೆ ಫೆಂಗಸ್ ಖಳನಾಯಕನಂತೆ ವಕ್ಕರಿಸಿದೆ ಎನ್ನುವುದು ರೈತರ ಅಳಲು.

ಹಿಂಗಾರಿಗೆ ಅನುಕೂಲ
ಹಿಂಗಾರು ಮಳೆಯನ್ನು ನಂಬಿ ರಾಗಿ ಬಿತ್ತನೆ ಮಾಡಿರುವ ರೈತರಿಗೆ ಫೆಂಗಸ್ ಸುರಿಸಿದ ಮಳೆ ಅನಾನುಕೂಲಕ್ಕಿಂತ ಅನುಕೂಲವನ್ನೇ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಏಕೆಂದರೆ ಹಿಂಗಾರು ಬಿತ್ತನೆಯ ರಾಗಿ ಬೆಳೆ ಕಟಾವು ಆಗಲು ಇನ್ನೂ ಹದಿನೈದು ಇಪ್ಪತ್ತು ದಿನ ಬೇಕಾಗುತ್ತದೆ.ಹಿಂಗಾರು ಕೂಡ ಜಿಲ್ಲೆಯ ಎಲ್ಲಾ ಭಾಗಗಳಿಗೂ ಒಂದೇ ರೀತಿ ಮಳೆಯನ್ನು ಸುರಿಸಿಲ್ಲ. ಕಡಿಮೆ ಮಳೆಯಾಗಿರುವ ಶಿಡ್ಲಘಟ್ಟ ಚಿಂತಾಮಣಿ ಭಾಗದ ಕಡೆ ಈಗ ಸುರಿದ ಮಳೆಗೆ ರಾಗಿ ತೆನೆ ಬಲಿತು ಕಾಳುಗಟ್ಟಿಯಾಗಲು ಮಳೆ ಬೇಕಿತ್ತು.ಈಗ ಸುರಿದ ಮಳೆ ಅನುಕೂಲ ಮಾಡಿದೆ ಎನ್ನುವುದು ಅರಿಕೆರೆ ಗ್ರಾಮದ ಯುವ ರೈತ ಅಭಿಷೇಕ್ ರೈತರ ಮಾತು.
ಜಾನುವಾರುಗಳ ಸಂಕಷ್ಟ
ಜಿಲ್ಲೆಯ ಉದ್ದಗಲಕ್ಕೂ ತೋಟಗಾರಿಕೆ,ಕೃಷಿ ಚಟವಟಿಕೆಯ ಜತೆಗೆ ಹೈನುಗಾರಿಕೆ, ಕುರಿಸಾಗಣೆಯ ಮೇಲೆಯೂ ಕೂಡ ಹೆಚ್ಚಿನ ಜನ ಅವಲಂಬಿತರಾಗಿದ್ದಾರೆ. ಈ ಪೈಕಿ ದನ ಕರ ಕುರಿ ಮೇಕೆಗಳನ್ನು ಬಯಲಿಗೂ ಕಾಡಿಗೋ ಬೆಟ್ಟಸಾಲಿಗೋ ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಬರುವವರ ಸಂಖ್ಯೆ ಕಡಿಮೆಯೇನೂ ಕಡಿಮೆಯಿಲ್ಲ.ಇಂತಹ ಮಂದಿಗೆ ಫೆಂಗಸ್ ಭಾರೀ ಹೊಡೆತವನ್ನು ಕೊಟ್ಟಿದೆ.ಜಾನುವಾರುಗಳನ್ನು ಆಚೀಚೆ ಕಟ್ಟಿಹಾಕಲು ಕೂಡ ಅವಕಾಶ ನೀಡದಂತೆ ಚಳಿ ಸಹಿತ ಮಳೆ ಸುರಿದಿದ್ದು ಯಾವಾಗ ಬಿಡುವು ಕೊಡುವುದೋ ಎಂದು ಕಾಯುವಂತಾಗಿದೆ.

ನೆಲಕಚ್ಚಿದ ಪುಷ್ಪಕೃಷಿ
ಜಿಲ್ಲೆಯಲ್ಲಿ ರೇಷ್ಮೆ ಹೈನುಗಾರಿಕೆಯಂತೆ ಪುಷ್ಪಕೃಷಿಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ.ಇದೇ ಕಾರಣ ಒಮ್ಮೊಮ್ಮೆ ಹೆಚ್ಚಿನ ಆವಕದಿಂದಾಗಿ ಬೆಲೆ ಪಾತಾಳಕ್ಕೆ ಇಳಿಯುತ್ತದೆ. ಪಿತೃಪಕ್ಷ, ಆಷಾಡ ಉಳಿದಂತೆ ವರ್ಷದ ಎಲ್ಲಾ ದಿನಗಳಲ್ಲಿಯೂ ಉತ್ತಮ ಬೆಲೆಯಿರುತ್ತದೆ ಎಂಬ ನಂಬಿಕೆ ರೈತರದ್ದು.ಹೀಗೆ ಅನಾಮಿಕ ಅತಿಥಿಯಂತೆ ಬಂದು ಹವಾಮಾನವನ್ನೇ ತನ್ನ ನಿಯಂತ್ರಕ್ಕೆ ತೆಗೆದುಕೊಳ್ಳುವ ಫೆಂಗಲ್ ಚಂಡಮಾರುತವೋ, ಅಕಾಲಿಕ ಮಳೆಯ ಕಾರಣವಾಗಿ ಪುಷ್ಪಕೃಷಿ ನಂಬಿದ ಕೃಷಿಕರ ಬದುಕಿನಲ್ಲಿ ಅಮಾವಾಸ್ಯೆ ಬಂದುಬಿಡುತ್ತದೆ.ಪರಿಣಾಮ ಆರ್ಥಿಕ ಸಂಕಷ್ಟದ ಜತೆಗೆ ರೋಗಭೀತಿಯ ಭಯ ರೈತರನ್ನು ಹಿಂಡಿಹಿಪ್ಪೆ ಮಾಡಿದೆ.
ರೋಗ ಬೀತಿ
ಜಿಲ್ಲೆಯಲ್ಲಿ ಶೀತಗಾಳಿ ಮಳೆಯ ಪರಿಣಾಮ ಜನಜಾನುವಾರುಗಳಿಗೆ ರೋಗಭೀತಿ ಕಾಡುವಂತೆ ಮಾಡಿದ್ದು ಖಾಸಗಿ ಸರಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ.ಜನರಿಗೆ ಶೀತ,ನೆಗಡಿ, ಕೆಮ್ಮು, ಗಂಟಲು ನೋವು,ಚಳಿ ಬಾದೆ ಕಾಡುತ್ತಿದ್ದು ಹೊರರೋಗಿ ವಿಭಾಗ ಹೌಸ್‌ಫುಲ್ ಆಗಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಒಟ್ಟಾರೆ ಫೆಂಗಲ್ ಚಂಡಮಾರುತ ತಂದಿರುವ ಹವಾಮಾನ ವೈಪರಿತ್ಯದಿಂದಾಗಿ ದಿನಗೂಲಿಯನ್ನೇ ನಂಬಿ ಜೀವನ ನಡೆಸುತ್ತಿರುವ ಕೂಲಿ ಕಾರ್ಮಿಕರ ಬದುಕು,ಹೋಟೆಲ್ ಉದ್ಯಮ,ರಸ್ತೆಬದಿ ವ್ಯಾಪಾರಿಗಳು, ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿದೆ.
ಜಿಲ್ಲೆಯ ಪ್ರಮುಖ ಬೆಳೆಗಳಾದ ರೇಷ್ಮೆ,ಹೈನುಗಾರಿಕೆ,ಹಣ್ಣು ಹಂಪಲು, ಪುಷ್ಪಕೃಷಿ,ದಾಳಿಂಬೆ, ದ್ರಾಕ್ಷಿ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.ಶೀತ ಮತ್ತು ಮಳೆಯ ಪರಿಣಾಮ ಭೂಮಿ ಮತ್ತು ಬೆವರನ್ನು ನಂಬಿ ಬದುಕು ಕಟ್ಟಿಕೊಂಡಿರುವ ರೈತರು ಅಪಾರ ಪ್ರಮಾಣದ ನಷ್ಟಕ್ಕೆ ಗುರಿಯಾಗುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.