Tuesday, 13th May 2025

ಕಬಡ್ಡಿ ಆಟವಾಡುತ್ತಿದ್ದಾಗ ವಿದ್ಯಾರ್ಥಿನಿಗೆ ಹೃದಯಾಘಾತ

ಬೆಂಗಳೂರು: ಸಹಪಾಠಿಗಳ ಜೊತೆ ಆಟವಾಡುತ್ತಿದ್ದ ವೇಳೆ ಹೃದಯಾಘಾತದಿಂದ ಸ್ಥಳ ದಲ್ಲೇ ಕುಸಿದು ಬಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ವಿದ್ಯಾರ್ಥಿನಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗೆಳತಿಯರ ಜೊತೆ ಕಬಡ್ಡಿ ಆಟವಾಡುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿದೆ.

 

ಮೃತ ವಿದ್ಯಾರ್ಥಿನಿ ಪ್ರಥಮ ಪಿಯುಸಿ ಓದುತ್ತಿದ್ದ ಸಂಗೀತಾ (17) ಎಂದು ಗುರುತಿಸಲಾಗಿದೆ. ಸಾವಿನ ಸುದ್ದಿ ತಿಳಿದು ಸಂಗೀತಾರ ಸ್ನೇಹಿತರು, ಪೋಷಕರ ಕಣ್ಣಿರ ಕೋಡಿ ಹರಿದಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ಮೃತರು ಧಾರವಾಡ ಮೂಲದವರಾಗಿದ್ದು, ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ವಾಸವಿದ್ದರು. ಕಬಡ್ಡಿ ಆಡುವಾಗ ಒಮ್ಮೆಲೆ ಕುಸಿದು ಬಿದ್ದ ಸಂಗೀತಾರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮಾರ್ಗ ಮಧ್ಯವೇ ಪ್ರಾಣ ಬಿಟ್ಟಿರುವುದಾಗಿ ವೈದ್ಯರು ಆಸ್ಪತ್ರೆಯಲ್ಲಿ ತಿಳಿಸಿದರು.

ಕ್ರೀಡಾ ಉತ್ಸವದಲ್ಲಿ ಮಹಿಳೆಯರ ತಂಡದ ಕಬಡ್ಡಿ ಆಯೋಜನೆಗೊಂಡಿತ್ತು. ಈ ವೇಳೆ ಸಂಗೀತಾ ಅವರು ತಮ್ಮ ತಂಡದ ಪರ ರೈಡ್ ಗೆ ತೆರಳಿದ್ದರು. ಪ್ರತಿ ತಂಡದ ಸದಸ್ಯರು ಸಂಗೀತಾರನ್ನು ಕ್ಯಾಚ್ ಮಾಡಲು ಮುಂದಾದಾಗ ಅವರಿಗೆ ಎದೆ ಹಿಡಿದುಕೊಂಡು ಕುಸಿದುಬಿದ್ದಿದ್ದಾರೆ.