Tuesday, 13th May 2025

H D Kumaraswamy: ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ವಾಪಸ್ ಪಡೆಯಲಿದೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 

ತುಮಕೂರು: ಡಿಸಿಎಂ ಡಿ.ಕೆ. ಶಿವಕುಮಾರ್  ಶಕ್ತಿ ಯೋಜನೆ ಬಗ್ಗೆ ಮಾತನಾಡಿರುವುದು ಜನರ ಪಲ್ಸ್ ತಿಳಿದು ಕೊಳ್ಳೋಕೆ. ಇದು ಕೇವಲ ಆರಂಭ, ಮುಂದೆ ಹಂತ ಹಂತವಾಗಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ವಾಪಸ್ ಪಡೆಯಲಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದರು.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಿ, ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆರ್ಶೀವಾದ ಪಡೆದು ಮಾತನಾಡಿ,  ಎಲ್ಲರ ಕಣ್ಣು ಚನ್ನಪಟ್ಟಣದ ಮೇಲಿದೆ. ನಾವು ಬಿಜೆಪಿಯವರು ಸೇರಿ ಎಲ್ಲರೂ ಜತೆಗೂಡಿ ಚನ್ನಪಟ್ಟಣ ಸೇರಿದಂತೆ ಮೂರು ಕಡೆ ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಚನ್ನಪಟ್ಟಣದಲ್ಲಿ ಮತದಾರರು ನಿಖಿಲ್ ಕುಮಾರ ಸ್ವಾಮಿಯವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ನಾಯಕರ ಪರಸ್ಪರ ಕಚ್ಚಾಟ ಯಾವ ರೀತಿ ನಡೀತಾ ಇದೆ ಅಂತ ನಾವು ಹೇಳಬೇಕಿಲ್ಲ. ಖರ್ಗೆಯವರು ಇಬ್ಬರು ನಾಯಕರನ್ನು ಅಕ್ಕ-ಪಕ್ಕ ಕೂರಿಸಿಕೊಂಡು ಉಪದೇಶ ಮಾಡಿ ಸಲಹೆ ಕೊಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಹೇಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ ಎಂದರು. 

ವಕ್ಸ್ ಆಸ್ತಿ ವಿಚಾರವಾಗಿ ಮಾತನಾಡಿ, ಇದು ಯಾಕೆ ಪ್ರಾರಂಭವಾಯಿತು? ಇಷ್ಟು ದಿನ ಯಾಕೆ ಇರಲಿಲ್ಲ ಕಾಂಗ್ರೆಸ್‌ನ ದುರಾಡಳಿತ, ಅಕ್ರಮ ಮುಚ್ಚಿ ಹಾಕಲು ಇದು ಪ್ರಾರಂಭವಾಗಿದೆ. ಕಾಂಗ್ರೆಸ್‌ನ ಅಕ್ರಮ ಮುಚ್ಚಿಕೊಳ್ಳುವ ಪ್ರಯತ್ನ ಇದು. ಸಂವಿಂಧಾನ ರಚನೆ ಮಾಡಬೇಕಾದರೆ ಪ್ರತಿ ಕುಟುಂಬದ ಹಕ್ಕು ನ್ಯಾಯಾಂಗದಲ್ಲಿ ಚರ್ಚೆಗಳು ಆರಂಭ ವಾಗಿವೆ. ಇದಕ್ಕೆ ಜನರ ಉತ್ತರ ಸಿಗಲಿದೆ. ಕೇಂದ್ರದ ಮೋದಿಯವರ ಕ್ಯಾಬಿನೆಟ್‌ನಲ್ಲಿ ಯಾವ ರೀತಿ ತೀರ್ಮಾನ ಆಗಬೇಕು ಎಂದು ಚರ್ಚೆ ಆಗಿದೆ. ಕಾನೂನು ವ್ಯಾಪ್ತಿಯಲ್ಲಿ ಇದೆಲ್ಲದಕ್ಕೂ ಅಂತಿಮ ಮಾಡಲಿಕ್ಕೆ ಕಾನೂನು ಬಲಿಷ್ಠವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.