Monday, 12th May 2025

ಮಾ.9 ರಂದು ಜಿಕೆವಿಕೆ ಆವರಣದಲ್ಲಿ ‘ರೈತ ಸೌರಶಕ್ತಿ ಮೇಳ’

ಬೆಂಗಳೂರು: ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್‌ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸ ಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾ.9 ರಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ‘ರೈತ ಸೌರಶಕ್ತಿ ಮೇಳ’ ಆಯೋಜಿಸಿದೆ.

“ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್‌ಸೆಟ್‌ ಬಳಕೆಯೇ ಪರಿಹಾರ. ಹಾಗಾಗಿ, ಈ ಬಡರೈತರು ಸ್ವಾವಲಂಬನೆ ಸಾಧಿಸಬೇಕು. ಅದಕ್ಕಾಗಿ ನಮ್ಮ ಸರ್ಕಾರ ‘ಕುಸುಮ್‌ ಬಿ’ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ನವೀನ ಮಾದರಿಯ ಸೌರ ಪಂಪ್‌ಸೆಟ್‌ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ಈ ವಿಚಾರವಾಗಿ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮೇಳ ಅತ್ಯುತ್ತಮ ವೇದಿಕೆಯಾಗಲಿದೆ. ಸೌರ ಪಂಪ್‌ಸೆಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್‌ ಎಂದರು.

“ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾ.9ರ ಸಂಜೆ 4 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜತೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ‘ಕುಸುಮ್ ಸಿ’ ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳಲ್ಲಿರುವ ವಿವಿಧ ವೋಲ್ಟೇಜ್ ವರ್ಗಗಳ ಹೊಸ ಸಬ್‌ಸ್ಟೇಷನ್‌ಗಳಿಗೂ ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದಾರೆ. ಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಸೇರಿದಂತೆ ಹಲವು ಸಚಿವರು ಮೇಳದಲ್ಲಿ ಭಾಗಿಯಾಗಲಿದ್ದಾರೆ,”ಎಂದು ಸಚಿವ ಜಾರ್ಜ್‌ ಮಾಹಿತಿ ನೀಡಿದರು.

“ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್‌ ಸೆಟ್‌ ಅಳವಡಿಕೆಯನ್ನು ರೈತರ ಸಮೂಹಗಳಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ 30 ರಷ್ಟು ಸಹಾಯಧನವನ್ನು ಶೇ 50 ಕ್ಕೆ ಹೆಚ್ಚಿಸಿದೆ. ಒಟ್ಟಾರೆ ಮೊತ್ತದಲ್ಲಿ ಶೇ 20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಇದಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಿದೆ,”ಎಂದರು.

Leave a Reply

Your email address will not be published. Required fields are marked *