ಚಿಕ್ಕಬಳ್ಳಾಪುರ: ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸವಲತ್ತುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಹಾಗೂ ಬೆಳೆ ಸಮೀಕ್ಷೆ ಮತ್ತು ಬೆಳೆ ಕಟಾವು ಪರೀಕ್ಷೆಗಳಿಗೆ ಸಂಬ0ಧಿಸಿದ ಮಾಹಿತಿಯನ್ನು ಪಡೆಯಲು ಇಲಾಖೆಯನ್ನು ಸಂಪರ್ಕಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಪಾಪಿರೆಡ್ಡಿ ತಿಳಿಸಿದರು.
ಕೃಷಿ ಇಲಾಖೆಯ ವತಿಯಿಂದ ತೊಂಡೇಬಾವಿ ಹೋಬಳಿಯ ಪಿಂರ‍್ಲಹಳ್ಳಿ ಗ್ರಾಮದ ಪ್ರಗತಿಪರ ರೈತ ಚನ್ನಪ್ಪ ಅವರ ಜಮೀನಿನಲ್ಲಿ ಹಮ್ಮಿಕೊಂಡಿದ್ದ ತೊಗರಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಒಂದೇ ಬೆಳೆಯನ್ನು ಬೆಳೆಯುವ ಬದಲಾಗಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಬೇಕು. ೨೦೨೪-೨೫ ನೇ ಸಾಲಿನ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ರಾಜ್ಯದ ಆಹಾರ ಸುಭದ್ರತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೆಚ್ಚಿನ ಆಹಾರ ಉತ್ಪಾದನೆ ಮಳೆ ಆಶ್ರಿತ ಪ್ರದೇಶದಿಂದ ಬರುತ್ತಿದ್ದು, ಈ ಪ್ರದೇಶಗಳಲ್ಲಿ ಬಹುತೇಕ ತೃಣ ಧಾನ್ಯ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತಿದೆ.ಸರಕಾರಗಳು ಮಳೆ ಆಶ್ರಿತ ಪ್ರದೇಶಗಳ ಅಭಿವೃದ್ಧಿಗಾಗಿ ಸ್ಪಷ್ಟ ಹಾಗೂ ಸಮಗ್ರ ಯೋಜನೆಯನ್ನು ರೂಪಿಸುವುದು ಅಗತ್ಯವಾಗಿದೆ ಎಂದ ಅವರು ತೊಗರಿ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ಸಮಗ್ರ ಮಾಹಿತಿಯನ್ನು ನೀಡಿದರು. ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಎಂ.ಮೋಹನ್ ಮಾತನಾಡಿ, ತೊಗರಿ ಬೆಳೆಯ ತಳಿಗಳಾದ ಬಿ.ಆರ್.ಜಿ-೧, ಬಿ.ಆರ್.ಜಿ-೨, ಬಿ.ಆರ್.ಜಿ-೩, ಬಿ.ಆರ್.ಜಿ-೪, ಬಿ.ಆರ್.ಜಿ-೫ ಮತ್ತು ಎನ್.ಟಿ.ಎಲ್-೨ ತಳಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ರೈತರಿಗೆ ತಿಳಿಸಿದರು ಹಾಗೂ ಮುಂಗಾರು ಹಂಗಾಮಿನಲ್ಲಿ ಪ್ರತಿ ವರ್ಷವೂ ಜೂನ್ ಮತ್ತು ಜುಲೈ ಮಾಹೆಯಲ್ಲಿ ರೈತರು ಕಡ್ಡಾಯವಾಗಿ ತೊಗರಿ, ಮುಸುಕಿನ ಜೋಳ, ರಾಗಿ ಮತ್ತು ನೆಲಗಡಲೆ ಬೆಳೆಗಳಿಗೆ ಬೆಳೆ ವಿಮೆಗೆ ನೊಂದಣಿ ಮಾಡಿಸಿಕೊಳ್ಳಲು ಮನವಿ ಮಾಡಿದರು.
ಪ್ರಗತಿಪರ ರೈತ ಬೆಳಚಿಕ್ಕನಹಳ್ಳಿ ಗ್ರಾಮದ ಶ್ರೀರಾಮರೆಡ್ಡಿ ಮಾತನಾಡಿ, ರೈತರು ರಸಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ರೈತರು ಕಚೇರಿಗಳಿಗೆ ಭೇಟಿ ನೀಡಿ, ತಮಗೆ ಅವಶ್ಯವಿರುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಇಲಾಖೆಯ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಆತ್ಮ ಯೋಜನೆಯ ಜಿಲ್ಲಾ ಉಪಯೋಜನಾ ನಿರ್ದೇಶಕ ಸತೀಶ್ ಕುಮಾರ್ ಮಾತನಾಡಿ, “ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ”ಯು ಭಾರತದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಾಗಿದೆ. ಮಳೆಗಳು ಮತ್ತು ಅಕಾಲಿಕ ಮಳೆಗಳು ಹೆಚ್ಚಾಗಿ ಬಿತ್ತನೆಯ ಮುಂಚಿನ ನಷ್ಟಗಳು ಹಾಗೂ ಕೋಯ್ಲಿನ ನಂತರದ ನಷ್ಟಗಳನ್ನು ಕೂಡ ಈ ಯೋಜನೆಯು ಭರಿಸುತ್ತದೆ. ಆದ್ದರಿಂದ ಗ್ರಾಮೀಣ ಪ್ರದೇಶದ ರೈತರು ತಾವು ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬೇಕು ಹಾಗೂ ಈ ಯೋಜನೆಯಡಿ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ರೈತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಕೆ.ವಿ.ಭವ್ಯ ಹಾಗೂ ಪ್ರಗತಿಪರ ರೈತರುಗಳಾದ ಭೀಮೇಗೌಡ, ಜಗದಾಂಬ, ನಯಾಜ್ ಖಾನ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: chikkaballapurnews