Saturday, 10th May 2025

Deepak Chopra.ai: ಎಐ ಮೂಲಕ ಆರೋಗ್ಯ ಕ್ಷೇತ್ರ ಬದಲಿಸುವ ಉದ್ದೇಶದಿಂದ ದೀಪಕ್‌ ಚೋಪ್ರಾ.ಎಐ ಬಿಡುಗಡೆ ಮಾಡಿದ ಪೂಣಚ್ಚ ಮಾಚಯ್ಯ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಟಿಐಇ ಜಾಗತಿಕ ಸಮಾವೇಶ 2024 ಕಾರ್ಯಕ್ರಮದಲ್ಲಿ ಸೈಬರ್‌ಹ್ಯೂಮನ್‌.ಎಐ ಸಂಸ್ಥೆಯ ಸಿಇಓ ಮತ್ತು ಸಹ-ಸಂಸ್ಥಾಪಕರಾದ ಪೂಣಚ್ಚ ಮಾಚಯ್ಯ ಅವರು ಮಾನಸಿಕ ಸ್ವಾಸ್ಥ್ಯ, ಒತ್ತಡ ನಿರ್ವಹಣೆ ಮತ್ತು ಸಮಗ್ರ ಆರೋಗ್ಯ ಸೇವೆ ಕುರಿತ ಸಾಂಪ್ರದಾಯಿಕ ಜ್ಞಾನ ಮತ್ತು ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ಜೊತೆಗೂಡಿಸಿ ರಚಿಸಿರುವ ವಿಶಿಷ್ಟವಾದ ದೀಪಕ್‌ಚೋಪ್ರಾ.ಎಐ ಎಂಬ ಅದ್ಭುತ ವೇದಿಕೆಯನ್ನು ಬಿಡುಗಡೆ ಮಾಡಿದರು. ಡಾ. ದೀಪಕ್ ಚೋಪ್ರಾ ಅವರ ನೆರವಿನಿಂದ ಸಿದ್ಧಗೊಳಿಸಲಾಗಿರುವ ಈ ವೇದಿಕೆಯ ಮೂಲಕ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ.

ಸೈಬರ್‌ಹ್ಯೂಮನ್.ಎಐ ಅನ್ನುವುದು ಪೂಣಚ್ಚ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ತಂತ್ರಜ್ಞಾನವನ್ನು ಜೊತೆಗೂಡಿಸಿ ಎಲ್ಲರಿಗೂ ಉತ್ತಮವಾದ ಸಮಗ್ರ ಆರೋಗ್ಯ ಸೇವೆ ಒದಗಿಸಬೇಕು ಎಂಬುದು ಅವರ ಗುರಿಯಾಗಿದೆ. ಈ ಉದ್ದೇಶಕ್ಕ ಪೂರಕವಾಗಿ ದೀಪಕ್‌ಚೋಪ್ರಾ.ಎಐ ಅನ್ನು ಅನಾವರಣಗೊಳಿಸಲಾಗಿದೆ. ಪೂಣಚ್ಚ ಅವರು ಮೂಲತಃ ಕೊಡಗಿನವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ದೀಪಕ್‌ಚೋಪ್ರಾ.ಎಐ ಎನ್ನುವುದು ಡಾ.ಚೋಪ್ರಾ ಅವರ ಡಿಜಿಟಲ್ ರೂಪವಾಗಿದ್ದು, ಈ ವೇದಿಕೆ ಮುಖಾಂತರ ವೈಯಕ್ತಿಕ ಸಲಹೆ ಸೂಚನೆ, ಧ್ಯಾನ ಮಾರ್ಗದರ್ಶನ ಮತ್ತು ಇನ್ನಿತರ ಆರೋಗ್ಯ ಸಲಹೆಗಳನ್ನು ನೀಡಲಾಗುತ್ತದೆ. ಡಾ. ಚೋಪ್ರಾ ಅವರ ಪರಿಣತಿಯನ್ನು ಬಳಸಿಕೊಂಡು ಇಂದಿನ ಒತ್ತಡದ ಜಗತ್ತಿನಲ್ಲಿ ಮನುಷ್ಯರಿಗೆ ತೀರಾ ಅವಶ್ಯವಿರುವ ಆರೋಗ್ಯ ಸೇವೆಗಳನ್ನು ಈ ವೇದಿಕೆ ಮೂಲಕ ನೀಡಲಾಗುತ್ತದೆ.

ಈ ಕುರಿತು ಮಾತನಾಡಿರುವ ಪೂಣಚ್ಚ ಮಾಚಯ್ಯ ಅವರು, “ದೀಪಕ್‌ಚೋಪ್ರಾ.ಎಐ ನನ್ನ ಕನಸಿನ ಯೋಜನೆ ಮತ್ತು ಶ್ರಮಕ್ಕೆ ಸಿಕ್ಕ ಫಲ. ಜನರು ಸಮತೋಲಿತವಾದ, ದೃಢವಾದ, ಅರಿವಿನ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ವೇದಿಕೆಯನ್ನು ರಚಿಸುವ ನನ್ನ ಕನಸು ಈ ಮೂಲಕ ಈಡೇರಿದೆ. ಯಶಸ್ಸು ಸಾಧಿಸುವುದಕ್ಕೆ ಮಾನಸಿಕ ಯೋಗಕ್ಷೇಮ ಬಹಳ ಮುಖ್ಯ. ದೀಪಕ್‌ಚೋಪ್ರಾ.ಎಐ ಎಲ್ಲರಿಗೂ ಮಾನಸಿಕ ಯೋಗಕ್ಷೇಮ ಹೊಂದಲು ನೆರವಾಗುತ್ತದೆ” ಎಂದು ಹೇಳಿದರು.

ಡಾ. ದೀಪಕ್ ಚೋಪ್ರಾ ಅವರು, “ಮಾನವ ಬುದ್ಧಿವಂತಿಕೆ ಜೊತೆಗೆ ಎಐ ಅನ್ನು ಸೇರಿಸುವ ಮೂಲಕ ವ್ಯಕ್ತಿಗಳು ಸಮತೋಲಿತ ಜೀವನ ಮತ್ತು ಆಧ್ಯಾತ್ಮಿಕ ಬುದ್ಧಿವಂತಿಕೆ ಸಾಧಿಸುವ ಮಾರ್ಗವನ್ನು ಹಾಕಿಕೊಡುತ್ತಿದ್ದೇವೆ” ಎಂದು ಹೇಳಿದರು.

ಬೆಂಗಳೂರಿನಲ್ಲಿ ಡಿಸೆಂಬರ್ 10ರಿಂದ12ರವರೆಗೆ ನಡೆದ ಟಿಐಇ ಗ್ಲೋಬಲ್ ಸಮಾವೇಶದಲ್ಲಿ ದೀಪಕ್‌ ಚೋಪ್ರಾ.ಎಐ ವೇದಿಕೆಯ ಅಗಾಧ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಪೂಣಚ್ಚ ಮಾಚಯ್ಯ ಎಐ ಕುರಿತು ಮಾತನಾಡಿದರೆ ಡಾ. ಚೋಪ್ರಾ ಪ್ರಧಾನ ಭಾಷಣ ಮಾಡಿದರು. ಈ ಸಮಾವೇಶದಲ್ಲಿ ಅವರು ಎಐ ಆಧರಿತ ಯೋಗಕ್ಷೇಮ ಸೇವೆಗಳನ್ನು ಒದಗಿಸುವ ಕುರಿತು ಆಲೋಚಿಸಲು ಸ್ಟಾರ್ಟಪ್ ಮತ್ತು ನವೋದ್ಯಮಿಗಳಿಗೆ ಕರೆ ನೀಡಿದರು.

ಸೂಪರ್‌ ಟ್ಯಾಬ್‌.ಕೋ ಸಹಯೋಗದಲ್ಲಿ ಕಾರ್ಯ ನಿರ್ವಹಿಸುವ ದೀಪಕ್‌ಚೋಪ್ರಾ.ಎಐ ಬಳಸಿದಷ್ಟು ಪಾವತಿಸಿ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದು, ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಸುಲಭವಾಗಿ ದೊರಕಲಿದೆ. www.deepakchopra.ai ಗೆ ಭೇಟಿ ನೀಡುವ ಮೂಲಕ ಈ ಕುರಿತು ಹೆಚ್ಚಿ ಮಾಹಿತಿ ತಿಳಿಯಬಹುದು ಮತ್ತು ಸೇವೆಯನ್ನು ಹೊಂದಬಹುದು.