Sunday, 18th May 2025

ಹೆದ್ದಾರಿಯಲ್ಲಿ ಸತ್ತ ನಾಯಿಯನ್ನು ಪಕ್ಕಕ್ಕೆ ಇಡುವ ವೇಳೆ ಅಪಘಾತ, ಓರ್ವ ಸಾವು, ಮತ್ತೊರ್ವನ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ವಾಹನಕ್ಕೆ ಸಿಲುಕಿ ಮೃತಪಟ್ಟ ನಾಯಿಯ ಮೃತ ದೇಹ ತೆಗೆಯಲು ಹೋಗಿ ಅಪಘಾತಕ್ಕೊಳಗಾಗಿ ಓರ್ವ ಯುವಕ ಸಾವಿಗೀಡಾಗಿ, ಮತ್ತೊರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹುನೇಗಲ್ ಗ್ರಾಮದ ಬಳಿ ನಡೆದಿದೆ.

ದುರ್ಘಟನೆಯಲ್ಲಿ ಮೃತನಾದ ವ್ಯಕ್ತಿಯನ್ನು ಸಾಮಸೇನಹಳ್ಳಿಯ ಪ್ರಭು (30) ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಮಸೇನಹಳ್ಳಿಯ ಪ್ರಭು ಮತ್ತು ಆತನ ಸ್ನೇಹಿತ ಚಿಕ್ಕಬಳ್ಳಾಪುರದತ್ತ ಬೈಕ್ ನಲ್ಲಿ ತೆರಳುವ ವೇಳೆ ಹುನೇಗಲ್ ಗ್ರಾಮದ ಬಳಿ ವಾಹನಕ್ಕೆ ಸಿಲುಕಿ ಸಾವನ್ನಪ್ಪದ್ದ ನಾಯಿಯ ಮೃತ ದೇಹ ಕಂಡಿದೆ. ನಾಯಿಯ ಮೃತ ದೇಹದಿಂದ ಬೇರೆ ಯಾರಾದರೂ ದ್ವಿಚಕ್ರ ಸವಾರರಿಗೆ ಅಪಘಾತವಾಗಿ ತೊಂದರೆಗೊಳಗಾಗ ಬಹುದು ಎಂದು ಮಾನವೀಯತೆಯಿಂದ ರಸ್ತೆಯ ಬದಿಗಿಡಲು ಬೈಕ್ ಅನ್ನು ನಿಲ್ಲಿಸಿ ಮೃತದೇಹವನ್ನು ಪಕ್ಕಕ್ಕೆ ಇಡಲು ಮುಂದಾದ ವೇಳೆ, ಹಿಂಬದಿಯಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರು ಪ್ರಭು ಮತ್ತು ಅವರ ಸ್ನೇಹಿತನನ್ನು ನೋಡಿ ಏಕಾಏಕಿ ಬ್ರೇಕ್ ಹಾಕಿದ್ದಾನೆ.

ಅದೇ ವೇಳೆಯಲ್ಲಿ ಹಿಬಂದಿಯಿಂದ ಬಂದ ಟಿಪ್ಪರ್‌ ಲಾರಿಯೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದಿದೆ. ಇನ್ನು ಈ ರಭಸದಿಂದ ಸ್ಕಾರ್ಪಿಯೋ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ದ್ವಿಚಕ್ರ ವಾಹನದ ಸವಾರರಿಗೆ ಡಿಕ್ಕಿ ಹೊಡೆದು ಅಪಾಯ ಉಂಟಾಗಿದೆ.

ಡಿಕ್ಕಿಯ ತೀವ್ರತೆಗೆ ಪ್ರಭು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಯುವಕನನ್ನು ಕೂಡಲೇ ಸ್ಥಳೀಯರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಅಲ್ಲಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: Crime News : ಅಕ್ರಮ ಸಂಬಂಧ ಉಳಿಸಲು ಸುಫಾರಿ ಕೊಟ್ಟು ಹೆತ್ತಮ್ಮನನ್ನೇ ಕೊಂದ ಮಗಳು