Wednesday, 14th May 2025

Chikkaballapur News: ಬಾರದ ಮಳೆಯಿಂದಾಗಿ ಬೆಳೆ ನಷ್ಟ, ಬರಪೀಡಿತ ತಾಲೂಕು ಎಂದು ಘೋಷಿಸಲು ಮನವಿ

ಬಾಗೇಪಲ್ಲಿ: ತಾಲೂಕಿನ ಪಾತಾಪಾಳ್ಯ ಹೋಬಳಿಯ ಬಿಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಉಗ್ರಾಣಂಪಲ್ಲಿ ಗ್ರಾಮದಲ್ಲಿ ಪ್ರಗತಿಪರ ರೈತ ನರಸಿಂಹ ರೆಡ್ಡಿ ಮಳೆಯಾಶ್ರಿತವಾಗಿ ಸುಮಾರು 5 ಎಕರೆಯಲ್ಲಿ ಮೆಕ್ಕೆಜೋಳದ ಬೆಳೆಯನ್ನು ಹಾಕಿರುತ್ತಾರೆ.

ಆದರೆ ಸಕಾಲದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ನಷ್ಟವನ್ನು ಅನುಭವಿಸುತ್ತಿದ್ದು,ಸಾಲದ ಸುಳಿಗೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರಕಾರಗಳು ಈ ರೀತಿಯ ಬೆಳೆ ನಷ್ಟವಾಗಿರುವ ಕಡೆ ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಿ ಬರಪೀಡಿತ ಪ್ರದೇಶವನ್ನಾಗಿ ಬಾಗೇಪಲ್ಲಿ ತಾಲೂಕನ್ನು ಘೋಷಿಸಲು ಆಗ್ರಹಿಸಿದ್ದಾರೆ.

ಅಷ್ಟೇ ಅಲ್ಲದೆ ರೈತರ ಸಾಲ ಮನ್ನಾ ಮಾಡಿ, ಸಾಲ ನೀಡುವುದನ್ನು ಮುಂದುವರಿಸಬೇಕು ಮತ್ತು ರೈತರಿಗೆ ನಷ್ಟ ಪರಿಹಾರಗಳು ಶೀಘ್ರವಾಗಿ ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತೆನೆಕಟ್ಟದ ಜೋಳ: ತಾಲೂಕಿನ ಬಹುತೇಕ ಮಳೆಯಾಶ್ರಿತ ಮೆಕ್ಕೆ ಜೋಳದ ಬೆಳೆಯು ತೆನೆ ಕಟ್ಟುವ ವೇಳೆ ಮಳೆ ಬಾರದ ಹಿನ್ನಲೆಯಲ್ಲಿ,ತೆನೆ ಬಿಡದೆ,ಬೆಳೆ ಕಮರಿ ಹೋಗಿದೆ. ಇದರಿಂದಾಗಿ ರೈತನು ಬೆಳೆ ನಿರ್ವಹಣೆಯ ಖರ್ಚು ಸಿಗದಂತಾಗಿ ಕಂಗಾಲಾಗಿದ್ದಾರೆ.ಹಾಗೇಯೆ ಶೇಂಗಾ ಬೆಳೆಯೂ ಕಾಯಿ ಬಲಿಯುವಾಗ ಮಳೆ ಬಾರದೆ, ಬೆಳೆ ನಷ್ಟ ವಾಗಿದೆ. ಇದರಿಂದಾಗಿ ತಾಲೂಕಿನ ಗೂಳೂರು, ಪಾತಪಾಳ್ಯ, ಕಸಬಾ ಸೇರಿದಂತೆ ಬಹುತೇಕ ಎಲ್ಲ ಹೋಬಳಿ ಗಳಲ್ಲೂ ಬೆಳೆ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: Chikkaballapur News: ಪರಿಸರ ಸಂರಕ್ಷಣಾ ಕಾರ್ಯ ನಮ್ಮೆಲ್ಲರ ಕರ್ತವ್ಯ-ಪ್ರಶಾಂತ್