Monday, 19th May 2025

Chikkaballapur News: ಮಗುವಿನ ಪಾಲನೆಯಲ್ಲಿ ಆರೈಕೆದಾರರ ಪಾತ್ರ ದೊಡ್ಡದು: ನಾಗಮಣಿ

ಗುಡಿಬಂಡೆ : ತರಬೇತಿ ಪಡೆದ ತಾವೆಲ್ಲರೂ ಇಲಾಖೆ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು. ಶಿಶುಗಳನ್ನು ಉತ್ತಮ ರೀತಿಯಲ್ಲಿ ಆರೈಕೆ  ಮಾಡಬೇಕು. ಮಕ್ಕಳ ಆಹಾರ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಾಗಮಣಿ ಎಂ ತಿಳಿಸಿದರು.

ತಾಲ್ಲೂಕು ಪಂಚಾಯಿತಿ  ಸಾಮರ್ಥ್ಯ ಸೌಧದಲ್ಲಿ ಇಂದು“ಕೂಸಿನ ಮನೆ’ಕೇರ್ ಟೇಕರ್ಸ್ ಎರಡನೇ ಹಂತದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ತರಬೇತಿಯು  ಏಳು ದಿನಗಳು  ನಡೆಯುತ್ತದೆ. ಇಲ್ಲಿ ಕಲಿಸುವ ಪ್ರತಿಯೊಂದು ವಿಷಯಗಳು ಮಹತ್ವದಾಗಿದೆ. ಆದ್ದರಿಂದ ತರಬೇತಿ ಪಡೆದುಕೊಳ್ಳುತ್ತಿರುವ ಶಿಬಿರಾರರ್ಥಿ ಗಳು ಪ್ರತಿಯೊಂದು ಅರ್ಥಮಾಡಿಕೊಳ್ಳಬೇಕು.ಅಂದಾಗ ಮಾತ್ರ ನೀವು ಕೂಸಿನ ಮನೆ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನರೇಗಾ ಕೂಲಿಕಾರ್ಮಿಕರು ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರುವುದು ಮತ್ತು ಬಡ ಕಾರ್ಮಿಕರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗುವುದರಿಂದ ಮಕ್ಕಳ ಪಾಲನೆ, ಪೋಷಣೆ ಕಷ್ಟಕರ ವಾಗುತ್ತದೆ ಇದಕ್ಕೆ  ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಒಂದು“ಕೂಸಿನ ಮನೆ’ಪ್ರಾರಂಭಿಸಲಾಗಿದೆ. ಹೀಗಾಗಿ, ೩ ವರ್ಷದೊಳಗಿನ ಮಕ್ಕಳು ಈ ಕೂಸಿನ ಮನೆಯಲ್ಲಿ ಆರೈಕೆ ಮಾಡಲಾಗುತ್ತದೆ ಎಂದರು.

ತಾವು ಲಾಲನೆ-ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಕೊಟ್ಟು ಅವರನ್ನು ಆರೈಕೆ ಮಾಡಬೇಕು ಇದರಿಂದಾಗಿ ಮಕ್ಕಳ ಪೌಷ್ಟಿಕಾಂಶದ ಕೊರತೆಯೂ ನೀಗುತ್ತದೆ ಎಂದು ಹೇಳಿದರು.  ಗ್ರಾಮೀಣ ಪ್ರದೇಶದ ಮಕ್ಕಳ ಹಾಗೂ ಮಹಿಳೆಯರ ಶ್ರಯೋಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದರು.

ಮೇಲ್ವಿಚಾರಕಿ ಸರೋಜಮ್ಮ ಮಾತನಾಡಿ, ಈ ತರಬೇತಿ ಪೋಷಕರು ಕೂಸಿನ ಮನೆಯಲ್ಲಿ ಮಗುವನ್ನು ಬಿಟ್ಟು ಹೋದಾಗ ಯಾವ ರೀತಿ ಬೆಳೆಸಬೇಕು ಎಂಬುವುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಆದ್ದರಿಂದ ಶಿಬಿರಾರರ್ಥಿಗಳ ಪ್ರತಿಯೊಂದು ವಿಷಯಗಳನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿಷಯ ನಿರ್ವಾಹಕರಾದ ಸುಭ್ರಮಣ್ಯ, ಐಇಸಿ ಸಂಯೋಜಕರಾದ ರಾಮಾಂಜಿ, ಮೇಲ್ವಿಚಾರಕ ರಾದ ಗಾಯತ್ರಿ, ಡಿಟಿಸಿ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.