ನಿಯಮ ಪಾಲಿಸದ ಅಂಗಡಿಗಳ ಎತ್ತಂಗಡಿಯ ಎಚ್ಚರಿಕೆ ನೀಡಿದ ನಗರಸಭೆ
ಚಿಕ್ಕಬಳ್ಳಾಪುರ : ನಿಯಮ ಪಾಲಿಸದ ಬೀದಿಬದಿ ವ್ಯಾಪಾರಿಗಳಿಗೆ ಎತ್ತಂಗಡಿಯ ಎಚ್ಚರಿಕೆ ನೀಡಿದ ನಗರಸಭೆ ಆಡಳಿತ ಬೀದಿಬದು ವ್ಯಾಪಾರ ಮಾಡುವ ಸಂದರ್ಭದಲ್ಲಿ ರಸ್ತೆ ಒತ್ತುವರಿ ಮಾಡದಂತೆ, ಆಹಾರ ಸುರಕ್ಷತೆ ಕಾಪಾಡುವುದು ಕಡ್ಡಾಯ ಎಂಬ ಫರ್ಮಾನು ಹೊರಡಿಸಿದ ಘಟನೆ ನಗರಸಭೆಯಲ್ಲಿ ನಡೆಯಿತು.
ಚಿಕ್ಕಬಳ್ಳಾಪುರ ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬೀದಿಬದಿ ವ್ಯಾಪಾರಿಗಳ ಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಕುರಿತು ಅವರು ಮಾತನಾಡಿದರು.
ಸಾರ್ವರ್ಜನಿಕರ ಹೋಟೆಲ್ ಮಾಲೀಕರು ಸಹ ನಗರದ ಬಿಬಿ ರಸ್ತೆಯಲ್ಲಿ ಪ್ರತ್ಯೇಕ ಆಹಾರ ಬಂಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದು, ಇನ್ಮುಂದೆ ಈ ರೀತಿ ಮಾಡುವಂತಿಲ್ಲ. ಒಬ್ಬರಿಗೆ ಒಂದು ಕಡೆ ಮಾತ್ರ ಅವಕಾಶ. ನಿಯಮ ಪಾಲಿಸ ದಿದ್ದಲ್ಲಿ ನಗರಸಭೆ ವತಿಯಿಂದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಗಜೇಂದ್ರ ಖಡರ್ ಎಚ್ಚರಿಕೆ ನೀಡಿದರು.
ಹೋಟೆಲ್ ಮಾಲೀಕರು ರಸ್ತೆಬದಿಯಲ್ಲಿ ಆಹಾರ ಅಂಗಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವ ಕುರಿತು ಸಾಕಷ್ಟು ದೂರಗಳು ಬಂದಿವೆ. ಆದ್ದರಿಂದ ಇನ್ನುಮುಂದೆ ಈ ರೀತಿ ಮಾಡುವಂತಿಲ್ಲ. ಆಹಾರ ರಸ್ತೆ ನಿರ್ಮಾಣಕ್ಕೆ ಜಾಗ ನಿಗದಿ ಮಾಡಬೇಕಿದೆ. ಅಲ್ಲಿವರೆಗೆ ನಿಯಮಾನುಸಾರ ವ್ಯಾಪಾರ ಮುಂದುವರಿಸಿ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಚಿಕ್ಕಬಳ್ಳಾಪುರ ನಗರ ಪ್ರವಾಸಿಗರ ನೆಚ್ಚಿನ ತಾಣವಾಗುತ್ತಿದ್ದು, ಹೊರ ಜಿಲ್ಲೆಗಳಿಂದ ಬರುವವರ ಸಂಖ್ಯೆಯೂ ಜಾಸ್ತಿ ಆಗಿದೆ. ಬೀದಿಬದಿ ಆಹಾರ ಬಂಡಿಗಳಿAದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸೂಕ್ತ ಸ್ವಚ್ಛತೆ ಕಾಪಾಡುತ್ತಿಲ್ಲ. ಇದರಿಂದ ನಗರದ ಅಂದ ಕೆಡುತ್ತಿದೆ. ಆದ್ದರಿಂದ ಬೀದಿಬದಿ ವ್ಯಾಪಾರಿಗಳು ನಗರದ ಸ್ವಚ್ಛತೆ, ಆಹಾರ ಸುರಕ್ಷತೆ, ಸಂಚಾರ ದಟ್ಟಣೆ ಆಗದಂತೆ ತಮ್ಮ ವ್ಯಾಪಾರ ವಹಿವಾಟು ಗಳನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಬಹಳಷ್ಟು ಮಂದಿ ಹೋಟೆಲ್ ಇರುವವರು ಕೂಡ ಸಂಜೆ ವೇಳೆ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ತಂದು ವ್ಯಾಪಾರ ಮಾಡುತ್ತಿರುವುದಲ್ಲದೆ ಪರವಾನಗಿ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ಪರವಾನಗಿ ಇರುವವರು ಹಾಗೂ ಇಲ್ಲದ ವರನ್ನು ಪತ್ತೆಹಚ್ಚಿ ಡೆನಲ್ಮ್ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಪರಿಸರ ಇಂಜಿನಿಯರ್ ಉಮಾಶಂಕರ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ಪಾದಚಾರಿಗಳಿಗೆ ತೊಂದರೆ ಆಗದಂತೆ ನಡೆದುಕೊಳ್ಳಬೇಕು. ಸ್ವಚ್ಛತೆ, ಆಹಾರದ ಗುಣಮಟ್ಟವನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಹೇಳಿದರು.
ಸಂಚಾರಿ ಠಾಣೆ ಎ ಎಸ್ ಐ ನಾಗರಾಜು ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಅಂಗಡಿಗಳಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇದರಿಂದ ಬಿಬಿ ರಸ್ತೆಯಲ್ಲಿ ದಟ್ಟಣೆ ಉಂಟಾಗುತ್ತಿದ್ದು, ಅಪಘಾತಗಳಿಗೆ ದಾರಿ ಮಾಡಿ ಕೊಡುತ್ತಿದೆ. ಯಾರಿಗೂ ತೊಂದರೆಯಾಗದAತೆ ವ್ಯಾಪಾರ ಮಾಡಿಕೊಂಡರೆ ಇಲಾಖೆಯಿಂದ ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ವ್ಯವಸ್ಥಾಪಕ ವೆಂಕಟಾಚಲಪತಿ ಮಾತನಾಡಿ, ಬಾಡಿಗೆ ಅಂಗಡಿಗಳು ಫುಟ್‌ಪಾತ್ ಮೇಲೆ ಬಂಡಿ ಇಟ್ಟು ಪ್ರತ್ಯೇಕ ವ್ಯಾಪಾರ ಮಾಡುತ್ತಿದ್ದಾರೆ. ಯಾರು ಸಹ ಕಾಯಂ ಶೆಡ್ ನಿರ್ಮಾಣ ಮಾಡುವಂತಿಲ್ಲ ಎಂದು ಹೇಳಿದರು. ಯಾರೇ ವ್ಯಾಪಾರಿಗಳ ಆಗಲಿ ಅನುಮತಿ ಪಡೆಯುವುದು ಕಡ್ಡಾಯ. ೧೫೦ರೂಪಾಯಿ ಕಟ್ಟಿ ಎಲ್ಲರೂ ಸಹ ಕಡ್ಡಾಯವಾಗಿ ಅನುಮತಿ ಪಡೆಯಿರಿ. ಒಮ್ಮೆ ಪಡೆದರೆ ೩ ವರ್ಷದವರೆಗೆ ಇರುತ್ತದೆ ಎಂದು ಹೇಳಿದರು.
ನಗರಸಭೆ ಆಯುಕ್ತ ಮನ್ಸೂರ್ ಅಲಿ ಮಾತನಾಡಿ, ಹೋಟೆಲ್ ಮಾಲೀಕರು ರಸ್ತೆಬದಿ ಅಂಗಡಿಗಳನ್ನು ಇಡು ವಂತಿಲ್ಲ. ಒಬ್ಬರಿಗೆ ಒಂದೇ ಅಂಗಡಿಗೆ ಮಾತ್ರ ಅವಕಾಶ. ಯಾರಾದರೂ ನಿಯಮ ಉಲ್ಲಂಘಿಸಿದಲ್ಲಿ ಸೂಕ್ತ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ರಸ್ತೆ ಬದಿ ವ್ಯಾಪಾರಿಗಳಿಂದ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗ್ತಿದೆ. ಯಾವುದೇ ಅನುಮತಿ ಇಲ್ಲದೆ ಬೀದಿಬದಿ ವ್ಯಾಪಾರ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ, ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ, ಗುಣಮಟ್ಟದ ಆಹಾರ ವಿತರಣೆ ಆಗುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬಂದಿವೆ ಎಂದು ಹೇಳಿದರು.
ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅಮರ್ ಮೋಗ್ಲಿ ಮಾತನಾಡಿ, ರಾತ್ರಿ ೧೧ ಗಂಟೆಗೆ ಸರಿಯಾಗಿ ಅಂಗಡಿಗಳನ್ನು ಬಂದ್ ಮಾಡಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾರು, ಬೈಕ್‌ಗಳು ರಸ್ತೆ ಬದಿಯಲ್ಲೇ ನಿಲ್ಲುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ರಸ್ತೆ ಬದಿ ದಟ್ಟಣೆ ಆಗದಂತೆ ವ್ಯಾಪಾರಸ್ತರೇ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ವ್ಯಾಪಾರಕ್ಕೆ ಅವಕಾಶ ಇರುವುದಿಲ್ಲ ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಇದೇ ವೇಳೆ ಮಾತನಾಡಿದ ಬೀದಿಬದಿ ವ್ಯಾಪಾರಿಗಳು, ಶನಿವಾರ, ಭಾನುವಾರ ಸೇರಿದಂತೆ ರಜಾ ದಿನಗಳಂದು ಅಂಗಡಿಗಳನ್ನು ತೆರೆಯಲು ಹೆಚ್ಚಿನ ಸಮಯಾವಕಾಶಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರ ಠಾಣೆ ಪಿಎಸ್‌ಐ ಅಮರ್ ಮೋಗ್ಲಿ ಇದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಸ್ಲಾಂ ಪಾಷ ಮಾತನಾಡಿ, ಪೊಲೀಸ್ ಇಲಾಖೆಯಿಂದ ವಾರಕ್ಕೊಮ್ಮೆ ಬಂದು ಬಿಗಿ ಬಂದೋಬಸ್ತ್ ಮಾಡುವಂತೆ ಮನವಿ ಮಾಡಿದರು.
ಆಹಾರ ಸುರಕ್ಷತಾ ಅಧಿಕಾರಿ ಬಿ ಹರೀಶ್ ಮಾತನಾಡಿ, ಆಹಾರ ಗುಣಮಟ್ಟ ಮತ್ತು ನೀರಿನಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಗಳಾಗುತ್ತಿವೆ. ಪ್ರತಿಯೊಬ್ಬರೂ ದುಡಿಮೆಯ ದೃಷ್ಟಿಯಲ್ಲಷ್ಟೇ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಜನರ ಆರೋಗ್ಯ ದೃಷ್ಟಿಯಿಂದಲೂ ಪ್ರತಿಯೊಬ್ಬರೂ ಆಲೋಚಿಸಬೇಕು ಎಂದು ಸಲಹೆ ಮಾಡಿದರು.
ಪ್ರತಿಯೊಬ್ಬರೂ ಮಾರಾಟದ ಪರವಾನಗಿ ಪಡೆಯಬೇಕು. ಪ್ರತಿ ವರ್ಷವೂ ಎಲ್ಲರೂ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕು. ತಪ್ಪಿದಲ್ಲಿ ೬ ತಿಂಗಳು ಜೈಲುವಾಸ ಮತ್ತು ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುವುದು. ಅದಷ್ಟೇ ಅಲ್ಲದೇ ಇಲಾಖೆಯಲ್ಲಿ ಕಾನೂನು ರೀತಿ ಕ್ರಮಕ್ಕೆ ಅವಕಾಶವಿದ್ದು, ಎಫ್‌ಐಆರ್ ಕೂಡ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಬೋಂಡಾ, ಬಜ್ಜಿ ಮಾರುವ ಕೆಲ ವ್ಯಾಪಾರಿಗಳು ಕರಿದ ತಿಂಡಿ, ತಿನಿಸುಗಳನ್ನು ಪತ್ರಿಕೆಗಳ ಕಾಗದಗಳು ಮತ್ತು ಪ್ಲಾಸ್ಟಿಕ್ ಪೇಪರ್ ಬಳಕೆ ಮಾಡಲಾಗುತ್ತಿದೆ. ಕರಿದ ಆಹಾರಗಳಿಗೆ ಧೂಳು ಬರದಂತೆ ಕ್ರಮವಹಿಸಬೇಕು. ಆದರೆ ಯಾರೊಬ್ಬರೂ ಸಹ ಇದನ್ನು ಪಾಲಿಸುತ್ತಿಲ್ಲ. ಹಾಗಾಗಿ ಎಲ್ಲರೂ ಜನರ ಆರೋಗ್ಯ ಸುರಕ್ಷತಾ ಮನೋಭಾವದಿಂದ ವ್ಯಾಪಾರ ಮಾಡಬೇಕು. ಇದಲ್ಲದೆ ಕುಡಿಯಲು ಆರ್ ಒ ವಾಟರ್ ಕೊಡಬೇಕು. ಇದು ಸಹ ನಿಮ್ಮ ಜವಾಬ್ದಾರಿ. ಆಹಾರ ವಸ್ತುಗಳನ್ನು ಕೀಟಗಳು ಮತ್ತು ಇಲಿಗಳಿಂದಲೂ ರಕ್ಷಣೆ ಮಾಡುವುದು ಸಹ ವ್ಯಾಪಾರಿಗಳು ಮತ್ತು ಮಾಲೀಕರ ಕರ್ತವ್ಯ ಎಂದು ಹೇಳಿದರು.
ಅಡುಗೆ ಮಾಡುವ ಭಟ್ಟರು ಸಾಧ್ಯವಾದಲ್ಲಿ ಯೂನಿಫಾರ್ಮ್ ಮತ್ತು ತಲೆಗವಸು, ಬಾಯಿಗೆ ಮಾಸ್ಕ್ ಧರಿಸುವ ಜತೆಗೆ ಸ್ವಯಂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವ್ಯಾಪಾರದ ಸಂದರ್ಭದಲ್ಲಿ ಗಾಯಗಳು, ಜ್ವರ, ಇತ್ಯಾದಿ ಖಾಯಿಲೆ ಇದ್ದರೆ ಅಂತಹವರು ವ್ಯಾಪಾರ ಮಾಡಬಾರದು. ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನು ಎಲ್ಲರೂ ಪ್ರತ್ಯೇಕವಾಗಿ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಆಹಾರ ಸುರಕ್ಷತಾ ಅಧಿಕಾರಿಯ ಅಸಹಾಯಕ ಉತ್ತರ
ಆಹಾರ ಗುಣಮಟ್ಟದ ಜಾಗೃತಿ, ಸುರಕ್ಷತಾ ಕ್ರಮಗಳ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆಹಾರ ಸುರಕ್ಷತಾ ಅಧಿಕಾರಿ ಹರೀಶ್, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಆದಕಾರಣ ಜಾಗೃತಿ ಮತ್ತು ಸೂಕ್ತ ಕ್ರಮವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋರಿದ ಪ್ರಸಂಗ ನಡೆಯಿತು.
ಸಭೆಯಲ್ಲಿ ನಗರಸಭೆ ಸದಸ್ಯ ವೆಂಕಟೇಶ್, ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಸ್ಲಾಂ ಪಾಷ ಹಾಗೂ ಬಿಬಿ ರಸ್ತೆಯಲ್ಲಿನ ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಇತರರು ಹಾಜರಿದ್ದರು.