Saturday, 10th May 2025

Chikkaballapur News: ಗೌರಿಬಿದನೂರು ಬಿಜಿಎಸ್ ಶಾಲೆಯಲ್ಲಿ ಮಾತೃ ಭೋಜನ ಕಾರ್ಯಕ್ರಮ

ಗೌರಿಬಿದನೂರು : ನಗರದ ಹೊರವಲಯದಲ್ಲಿರುವ ಬಿ.ಜಿ.ಎಸ್. ಶಾಲೆಯಲ್ಲಿ ಶನಿವಾರ ಮಾತೃಭೋಜನ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಮಂಗಳನಾಥ ಸ್ವಾಮೀಜಿ ಮಾತನಾಡಿ,ವಿದ್ಯಾರ್ಥಿಗಳ ನಡುವೆ ಸೌಹಾರ್ಧತೆ ಮೂಡಿಬೇಕು ಎಂದು ಈ ಮಾತೃ ಭೋಜನ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ.

ಬೇರೊಬ್ಬರಿಗೆ ಅನ್ನವನ್ನು ಬಡಿಸುವುದು ನಮ್ಮ ದೇಶದ ಉದಾರತೆ ಮತ್ತು ಸಂಸ್ಕೃತಿಯಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಸಂಪ್ರದಾಯ ಕಲಿಸಬೇಕು. ಸಂಸ್ಕಾರವಂತ ಮಕ್ಕಳನ್ನು ರೂಪಿಸಿ ದೇಶದ ಸತ್ಪೆçಜೆಗಳನ್ನಾಗಿಸುವ ಶಕ್ತಿ ಬಿಜಿಎಸ್ ಶಾಲೆಗೆ ಇದೆ ಎಂದು ಹೇಳಿದರು.

ಪೋಷಕರು ಮಕ್ಕಳ ಪಠ್ಯ ಮತ್ತು ಪಠೇತರ ಚಟುವಟಿಕೆಗಳ ಮೇಲೆ ಗಮನವಿರಿಸಬೇಕು. ಅವರ ಬೆಳವಣಿಗೆಗೆ ಶಿಕ್ಷಣ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು. ಶಿಕ್ಷಕರು ಮತ್ತು ಪೋಷಕರ ನಡುವೆ ಪರಸ್ಪರ ಪೂರಕ ಸಂವಹನವಿರ ಬೇಕು ಎಂದು ಸಲಹೆ ನೀಡಿದರು

ಶಾಲೆಯ ಪ್ರಾಂಶುಪಾಲರಾದ ಎಂ.ವಿ.ಚಿಕ್ಕಜ್ಜಪ್ಪ ಮಾತನಾಡಿ ಎಲ್ಲಾ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವುದು ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ರವರ ಕನಸಾಗಿತ್ತು. ಶ್ರೀಗಳ ಕನಸನ್ನು ಪೂಜ್ಯ ಡಾ.ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿರವರು ನನಸು ಮಾಡುತ್ತಿದ್ದಾರೆ. ಅದರಲ್ಲೂ ಪೂಜ್ಯ ಶ್ರೀಗಳಿಗೆ ಗೌರಿಬಿದನೂರು ಶಾಲೆ ಎಂದರೆ ವಿಶೇಷವಾದ ಪ್ರೀತಿ ಅದಕ್ಕೆ ಕಾರಣಕರ್ತರು ಪೋಷಕರಾದ ನೀವುಗಳು ಎಂದರು.

ಮಾತೃಭೋಜನದ ಮಹತ್ವವನ್ನು ಪ್ರಸ್ತಾಪಿಸುತ್ತಾ, 1000 ಮಾತೆಯರು ಇಂದು ೩ಸಾವಿರ ವಿದ್ಯಾರ್ಥಿಗಳಿಗೆ ಊಟ ಬಿಡಿಸಿದ್ದಾರೆ. “ಜಾತಿ, ಧರ್ಮಗಳ ಭೇದ ಮೀರಿಸಿ, ಮಕ್ಕಳು ಪರಸ್ಪರ ಸ್ನೇಹಭಾವ ಮತ್ತು ಭಾವೈಕ್ಯತೆಗೆ ಪ್ರೋತ್ಸಾಹ ನೀಡುವುದೇ ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪದದ ಅರ್ಥವನ್ನು ಇಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ ಮಾತನಾಡಿ ಮಾತೃಭೋಜನ ಕಾರ್ಯಕ್ರಮವು  ಸರ್ವಸಮಾನತೆಯನ್ನು ಸಾರುವ ಕಾರ್ಯಕ್ರಮವಾಗಿದೆ.ಜಾತಿ,ಮತ,ಧರ್ಮವನ್ನು ಮೀರಿ ನಾವೆಲ್ಲರೂ ಒಂದೇ ಎಂಬ ಮನೋಭಾವದ ಪ್ರದರ್ಶನಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ ಎಂದರು.

ಕಲಿಕಾ ಸಮಯದಲ್ಲಿ ಮೊಬೈಲ್ ಬಳಕೆ ಅಪಾಯಕಾರಿ. ಅದು ವಿದ್ಯಾರ್ಥಿಗಳ ಸಾಧನೆಯ ಹಾದಿಗೆ ತೊಡಕುಂಟು ಮಾಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಜೀವನ ಮಾನವನ ಬದುಕಿನಲ್ಲೇ ಶ್ರೇಷ್ಠವಾದದ್ದು, ಈ ಅವಕಾಶವನ್ನು ವಿದ್ಯಾರ್ಥಿಗಳು ಗಮನದಲ್ಲಿರಿಸಿ ಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ, ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಮುತುವರ್ಜಿ ವಹಿಸಬೇಕು. ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದು ತರಗತಿಯಲ್ಲಿ ಮಾಡಿದ ಪಾಠ ಪ್ರವಚನದ ಬಗ್ಗೆ ಮಕ್ಕಳಿಗೆ ಮನೆಯಲ್ಲಿ ಓದುವಂತೆ ಹಾಗೂ ತರಗತಿ ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದರೆ ಮಕ್ಕಳು ಓದಿನಲ್ಲಿ ತೊಡಗಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ ಶಾಲೆಯ ಶಿಕ್ಷಕರೊಂದಿಗೆ ಪೋಷಕರಾದ ನೀವು ಸಹ ಸ್ಪೂರ್ತಿ ನೀಡಿದಲ್ಲಿ ಮಾತ್ರ ನಿಮ್ಮ ಮಕ್ಕಳಿಗೆ ಉತ್ತಮ ಜೀವನ ರೂಪಿಸಬಹುದಾಗಿದೆ .ಪೋಷಕರು ಮಕ್ಕಳಿಗೆ ಪೂರಕವಾಗಿ ಸ್ಪಂಧಿಸಿಲ್ಲ ಎಂದರೆ ಯಾವುದೇ ಪ್ರಯೋಜನ ವಾಗುವುದಿಲ್ಲ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವಿ. ಶ್ರೀನಿವಾಸಮೂರ್ತಿ ಮಾತನಾಡಿದರು .ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಪೂರ್ಣಕುಂಭ ಕಳಶಗಳೊಂದಿಗೆ ಶಾಲೆಗೆ ಬರಮಾಡಿಕೊಳ್ಳಲಾಯಿತು. ತಾಯಂದಿರು ತಮ್ಮ ಮಕ್ಕಳಿಗೆ ಬಗೆ-ಬಗೆಯ ಊಟ ಬಡಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಜನಾರ್ಧನಮೂರ್ತಿ, ನಗರಸಭೆ ಸದಸ್ಯ ಪುಣ್ಯವತಿ ಜಯಣ್ಣ, ಕೆ.ಹೆಚ್.ಪಿ.ಕಾರ್ಯನಿರ್ವಾಹಕ ಶ್ರೀನಿವಾಸಗೌಡ, ವೆಂಕಟರಾಮರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *