ಚಿಕ್ಕಬಳ್ಳಾಪುರ: ಹಳೇ ವೈಷಮ್ಯದ ಕಾರಣಕ್ಕಾಗಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಮ್ಮನಾಯಕಹಳ್ಳಿಯ ಗೇಟ್ ಬಳಿ ಶುಕ್ರವಾರ ರಾತ್ರಿ ಸುಮಾರು ೯ ರಿಂದ ೧೦ ಗಂಟೆಯ ನಡುವೆ ನಡೆದಿದೆ ಎನ್ನಲಾಗಿದೆ.
ತಾಲ್ಲೂಕಿನ ತಮ್ಮನಾಯಕನಹಳ್ಳಿ ನಿವಾಸಿ ಐವತ್ತೈದು ವರ್ಷದ ವೆಂಕಟೇಶ್ ಎಂದು ಗುರುತಿಸಲಾಗಿದ್ದು ಈತ ಜೆಡಿಎಸ್ ಮುಖಂಡ ಎನ್ನಲಾಗಿದೆ. ತಮ್ಮನಾಯಕನಹಳ್ಳಿ ಗೇಟ್‌ನಿಂದ ಮೃತ ವೆಂಕಟೇಶ್ ತನ್ನ ಸ್ವಗ್ರಾಮ ತಮ್ಮನಾಯಕನಹಳ್ಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಮನಸೋ ಇಚ್ಚೆ ದಾಳಿ ಮಾಡಿದ್ದಾರೆ. ದಾಳಿಯಿಂದಾಗಿ ರಕ್ತದ ಮಡುವಿನಲ್ಲೇ ಬಿದ್ದ ವೆಂಕಟೇಶ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಈ ಘಟನೆ ಏಕೆ ನಡೆದಿದೆ, ಯಾರು ಮಾಡಿದ್ದಾರೆ, ದಾಳಿ ಮಾಡಿದವರು ಯಾರು ಎನ್ನುವ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಎಸ್.ಪಿ ಕುಶಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಶ್ವಾನದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದು ಸ್ಥಳದಲ್ಲಿ ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.ಮೃತದೇಹವನ್ನು ಸರಕಾರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ಮರಣೋತ್ತರ ಪರೀಕ್ಷೆಯ ನಂತರ ಶನಿವಾರ ಮೃತ ವೆಂಕಟೇಶ್ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.ಆಸ್ಪತ್ರೆಯ ಬಳಿ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆಯ ಮಾಹಿತಿ ತಿಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಮೃತರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿ ಶಿಕ್ಷೆಕೊಡಬೇಕೆಂದು ಸರಕಾರವನ್ನು ಅಗ್ರಹಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.