ಚಿಕ್ಕಬಳ್ಳಾಪುರ: ಇಂದಿನ ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ಅಂಕಗಳಿಸುವಂತೆ ಒತ್ತಡ ಹೇರುತ್ತಿರುವು ದನ್ನು ಕಾಣುತ್ತಿದ್ದೇವೆ.ಆದರೆ ಅಂಕಗಳಿಕೆಯಷ್ಟೇ ಆದರೆ ಸಾಲದು,ಜೀವನ ಮೌಲ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೆ.ವಿ.ಶಿಕ್ಷಣ ಸಂಸ್ಥೆ ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಹೇಳಿದರು.
ನಗರ ಹೊರವಲಯದ ಕೆ.ವಿ.ಇಂಗ್ಲಿಷ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾ ರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವರ್ತಮಾನದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ದಟ್ಟವಾಗಿದೆ.ಇದರಿಂದ ತಪ್ಪಿಸಿಕೊಳ್ಳಲಾಗದಷ್ಟು ಪ್ರಭಾವ ವನ್ನು ಸಮಾಜದ ಮೇಲೆ ಬೀರಿವೆ. ಇದೇ ಕಾರಣವಾಗಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ. ಇದರ ಬದಲಿಗೆ ಪುಸ್ತಕದ ಓದು, ಸಂಗೀತಾಭ್ಯಾಸ, ಆಟೋಟಗಳಲ್ಲಿ ತೊಡಗುವುದು, ನೃತ್ಯಕಲೆಗಳಲ್ಲಿ ಹೆಚ್ಚಿನ ಆಸಕ್ತಿ ತೊಡಗಿಸಿಕೊಳ್ಳುವ ಮೂಲಕ ಯುವಜನತೆ ಮೊಬೈಲ್ ಗೀಳಿನಿಂದ ಹೊರಬರಬೇಕಿದೆ ಎಂದು ಸಲಹೆ ನೀಡಿದರು.
ಆಧುನಿಕತೆಯ ಭರಾಟೆಯಲ್ಲಿ ಚಿಕ್ಕವಯಸ್ಸಿನಲ್ಲೇ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳ ಶಿಸ್ತುಬದ್ಧ ಜೀವನಕ್ಕಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತರಾಗುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.
ನವಗ್ರಹ ಚಿತ್ರ ಖ್ಯಾತಿಯ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸ್ಯಾಂಡಲ್ ವುಡ್ ನಟ ಧರ್ಮ ಕೀರ್ತಿರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು, ಮಕ್ಕಳಿಗೆ ಅನುಕೂಲವಾಗುವ ರೀತಿ ಹಾಗೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅವರ ಅಭಿವೃದ್ಧಿಗೆ ಪೂರಕವಾದ ಶಿಕ್ಷಣವನ್ನು ಸೃಷ್ಟಿಸಿ, ಅವರ ಏಳಿಗೆಗೆ ಪೂರಕವಾದ ಶಿಕ್ಷಣವನ್ನು ಶಿಕ್ಷಕ ವೃಂದ ಹಾಗೂ ಪೋಷಕರು ಸೃಷ್ಟಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ತಿಳಿಸಿದರು.
ಕೆ.ವಿ ಇಂಗ್ಲೀಷ್ ಶಾಲೆಯಲ್ಲಿ ನಡೆದ ವರ್ಣರಂಜಿತ ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿ ಬದಲಾಗಿತ್ತು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಸೈನಿಕರಂತೆ ಶಿಸ್ತು ಪ್ರದರ್ಶನ ಮಾಡಿದ್ದು, ತರಗತಿಗಳಿಗೆ ಅನುಗುಣವಾಗಿ ತಂಡಗಳಲ್ಲಿ ಬಂದು ನುರಿತ ಕಲಾವಿದರಂತೆ ವಿವಿಧ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ನೋಡುಗರ ಕಣ್ಮನ ಸೆಳೆದರು.
ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಅತಿಥಿಗಳನ್ನು ಕೆ.ವಿ ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರು ಗೌರವಿಸಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ ಭಾರ್ಗವ್, ಗೌರಿಬಿದನೂರಿನ ವಿದ್ಯಾನಿಧಿ ಪಬ್ಲಿಕ್ ಸ್ಕೂಲ್ ಕಾರ್ಯ ದರ್ಶಿ ಪ್ರಾಂಶುಪಾಲರು ಹಾಗೂ ಸಂಚಾಲಕರಾಗಿರುವ ಮಧುಸೂದನ್, ಕೆ.ವಿ ಇಂಗ್ಲಿಷ್ ಸ್ಕೂಲ್ ಪ್ರಾಂಶುಪಾಲ ತ್ಯಾಗರಾಜ್, ಶ್ರೀ ಕೆ ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿ ಆಡಳಿತ ಅಧಿಕಾರಿ ಸಾಯಿ ಪ್ರಭು, ಟ್ರಸ್ಟಿಗಳಾದ ವಿ ಮುನಿಯಪ್ಪ, ನಿರ್ಮಲ ಪ್ರಭು, ಸುಜಾತ ನವೀನ್ ಕಿರಣ್, ವಿವಿಧ ಗಣ್ಯರು, ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: chikkaballapurnews