Saturday, 10th May 2025

death: ವಿದ್ಯುತ್ ತಂತಿ ತುಳಿದು ತಾಯಿ ಎದುರೇ ಪ್ರಾಣ ಬಿಟ್ಟ ಬಾಲಕ

turuvekere
ತುರುವೇಕೆರೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಎದುರೇ ವಿದ್ಯಾರ್ಥಿ ಮೃತ ಪಟ್ಟಿರುವ ಘಟನೆ ತಾಲೂಕಿನ ದ್ವಾರನಹಳ್ಳಿಯಲ್ಲಿ ನಡೆದಿದೆ. ಮೃತನನ್ನು 10ನೇ ತರಗತಿ ವಿದ್ಯಾರ್ಥಿ ಸಾಗರ್ ಎಂದು ಗುರುತಿಸಲಾಗಿದೆ.  ಸಾಗರ್ ದ್ವಾರನಹಳ್ಳಿಯ ರವಿಕುಮಾರ್ ಮತ್ತು ಮನು ದಂಪತಿಯ ಪುತ್ರ. ಇಲ್ಲಿಯ ಜೆಪಿ ಆಂಗ್ಲ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಶಾಲೆಯಿಂದ ಮನೆಗೆ ಬಂದ ಸಾಗರ್ ,  ತನ್ನ ತಂದೆ ರವಿಕುಮಾರ್ ಅನಾರೋಗ್ಯ ನಿಮ್ಮಿತ್ತ ಆಸ್ಪತ್ರೆಗೆ ತೆರಳಿದ್ದರು. ಆ ವೇಳೆ ಮನೆಯಲ್ಲಿದ್ದ ಸಗಣಿಯನ್ನು ತನ್ನ ತಾಯಿಯ ಜತೆಗೆ ತೆರಳಿ ತಿಪ್ಪೆಗೆ ಹಾಕಲು ಸಾಗರ್ ತೆರಳಿದ್ದ. ಆ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಕಾಣದೇ ಸಾಗರ್ ತುಳಿದಿದ್ದಾನೆ.  ಆ ಕ್ಷಣವೇ ಸಾಗರ್ ಕೆಳಗೆ ಬಿದ್ದು ಕೊನೆಯುಸಿರೆಳೆದನೆಂದು ಹೇಳಲಾಗಿದೆ. ಅಲ್ಲೇ ಇದ್ದ ತಾಯಿ ಮನು ಅವರು ಕೂದಲೆಳೆ ಅಂತರದಿಂದ ಪಾರಾದರೆಂದು ತಿಳಿದುಬಂದಿದೆ.
ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ 
ಕಳೆದ ಮೂರ‍್ನಾಲ್ಕು ದಿನಗಳ ಹಿಂದೆಯೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ಕುರಿತು ಬೆಸ್ಕಾಂನ ಲೈನ್ ಮೆನ್ ಸೇರಿದಂತೆ ಶಾಖಾ ವ್ಯವಸ್ಥಾಪಕರಿಗೂ ತಿಳಿಸಲಾಗಿತ್ತು. ಆದರೂ ಸಹ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತಾಳಿದ ಕಾರಣ ಅಮಾಯಕ ಜೀವ ಬಲಿಯಾಗಿದೆ.
ಅಮಾನತು ಮಾಡಿ
ವಿದ್ಯಾರ್ಥಿ ಸಾಗರ್ ನ ಶವವನ್ನು ನೋಡಲು ಆಗಮಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಶವ ಕಂಡು ಕೆಲ ಕಾಲ ಗದ್ಗತಿತರಾದರು. ವಿದ್ಯುತ್ ತಂತಿ ತುಂಡಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅವರನ್ನು ಕೂಡಲೇ ಅಮಾನತಿನಲ್ಲಿಡಬೇಕೆಂದು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಶೇಖರ್ ಅವರಿಗೆ ಸೂಚನೆ ನೀಡಿದರು.
ಪರಿಹಾರಕ್ಕೆ ಸೂಚನೆ 
ಅಮಾಯಕ ವಿದ್ಯಾರ್ಥಿ ಸಾಗರ್ ಬೆಸ್ಕಾಂ ನ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರವನ್ನು ಬೆಸ್ಕಾಂನಿಂದ ಕೊಡಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *