Wednesday, 14th May 2025

Tata Motors: ಬೆಂಗಳೂರಿನಲ್ಲಿ ಬಿಎಂಟಿಸಿಯಿಂದ ಮತ್ತೆ 148 ಸ್ಟಾರ್‌ ಬಸ್ ಎಲೆಕ್ಟ್ರಿಕ್ ಬಸ್‌ ಗಳ ಆರ್ಡರ್ ಸ್ವೀಕರಿಸಿದ ಟಾಟಾ ಮೋಟಾರ್ಸ್

ಸುಸ್ಧಿರ ನಗರ ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿರುವ ಟಾಟಾ ಸಂಸ್ಥೆ

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಸಂಸ್ಥೆಯು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯಿಂದ 148 ಎಲೆಕ್ಟ್ರಿಕ್ ಬಸ್‌ ಗಳಿಗೆ ಹೆಚ್ಚುವರಿ ಆರ್ಡರ್ ಪಡೆದುಕೊಂಡಿದೆ.

ಟಾಟಾ ಮೋಟಾರ್ಸ್‌ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್‌ ಕಂಪನಿಯು 12 ವರ್ಷಗಳ ಅವಧಿಗೆ 12-ಮೀಟರ್ ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್‌ ಆದ ಟಾಟಾ ಸ್ಟಾರ್‌ ಬಸ್ ಇವಿಗಳ ಪೂರೈಕೆ ಮತ್ತು ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಈ ಹಿಂದೆ 921 ಸ್ಟಾರ್ ಬಸ್ ಎಲೆಕ್ಟ್ರಿಕ್ ಬಸ್‌ ಗಳಿಗೆ ಆರ್ಡರ್ ನೀಡಲಾಗಿದ್ದು, ಅವುಗಳಲ್ಲಿ ಬಹುತೇಕ ಬಸ್ ಗಳನ್ನು ವಿತರಿಸಲಾಗಿದೆ. ಬಿಎಂಟಿಸಿಯಲ್ಲಿ ಆ ಬಸ್ ಗಳು ಶೇ.95ರಷ್ಟು ಹೆಚ್ಚು ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸುತ್ತಿವೆ.

ಸುಸ್ಥಿರ ಮತ್ತು ಆರಾಮದಾಯಕ ಪ್ರಯಾಣ ಸೌಲಭ್ಯ ಒದಗಿಸುವ ಟಾಟಾ ಸ್ಟಾರ್‌ ಬಸ್ ಇವಿಯು ಅತ್ಯುನ್ನತ ವಿನ್ಯಾಸ ಮತ್ತು ಅತ್ಯುತ್ತಮ ದರ್ಜೆಯ ಫೀಚರ್ ಗಳನ್ನು ಹೊಂದಿದೆ. ಈ ಶೂನ್ಯ ಹೊರಸೂಸುವಿಕೆಯ ಎಲೆಕ್ಟ್ರಿಕ್ ಬಸ್‌ ಗಳನ್ನು ನೆಕ್ಷ್ಟ್ ಜೆನ್ ಆರ್ಕಿಟೆಕ್ಚರ್‌ ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ನಗರದಾದ್ಯಂತ ಸುರಕ್ಷಿತ, ಆರಾಮದಾಯಕ ಮತ್ತು ಅನುಕೂಲಕರವಾದ ನಗರ ಪ್ರಯಾಣ ಒದಗಿಸಲು ಅತ್ಯಾಧುನಿಕ ಬ್ಯಾಟರಿ ವ್ಯವಸ್ಥೆಗಳನ್ನು ಹೊಂದಿವೆ.

ಈ ಕುರಿತು ಮಾತನಾಡಿದ ಬಿಎಂಟಿಸಿ ಎಂಡಿ ಐಎಎಸ್ ಶ್ರೀ ರಾಮಚಂದ್ರನ್ ಆರ್ ಅವರು, “ನಮ್ಮ ಸಾರಿಗೆ ವ್ಯವಸ್ಥೆಯನ್ನು ಅತ್ಯಾಧುನಿಕಗೊಳಿಸುವ ನಿಟ್ಟಿನಲ್ಲಿ ಹೆಚ್ಚುವರಿ 148 ಎಲೆಕ್ಟ್ರಿಕ್ ಬಸ್‌ ಆರ್ಡರ್ ಗಳನ್ನು ನೀಡುವ ಮೂಲಕ ಟಾಟಾ ಮೋಟಾರ್ಸ್‌ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸತ್ತಿದ್ದೇವೆ. ಪ್ರಸ್ತುತ ಟಾಟಾ ಎಲೆಕ್ಟ್ರಿಕ್ ಬಸ್‌ಗಳು ಅತ್ಯುತ್ತಮ ಕಾರ್ಯಕ್ಷಮತೆ ಒದಗಿಸುತ್ತಿವೆ. ಸುಸ್ಥಿರ ಮತ್ತು ಪರಿಣಾಮಕಾರಿ ಸಾರ್ವ ಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಮ್ಮ ಉದ್ದೇಶದ ಜೊತೆಗೆ ಟಾಟಾ ಬಸ್ ಗಳು ಸಂಪೂರ್ಣವಾಗಿ ಹೊಂದಿ ಕೊಂಡಿವೆ. ಈ ಹೊಸ ಬಸ್ ಗಳು ನಮ್ಮ ಸಾರಿಗೆ ವ್ಯವಸ್ಥೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಬೆಂಗಳೂರಿನ ನಾಗರಿಕರಿಗೆ ಪರಿಸರ ಸ್ನೇಹಿ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸಲಿದೆ” ಎಂದು ಹೇಳಿದರು.

ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್‌ನ ಸಿಇಓ ಮತ್ತು ಎಂಡಿ ಶ್ರೀ. ಅಸೀಮ್ ಕುಮಾರ್ ಮುಖೋಪಾಧ್ಯಾಯ ಅವರು, “ಬಿಎಂಟಿಸಿ ನಮ್ಮ ಎಲೆಕ್ಟ್ರಿಕ್ ಬಸ್ ಗಳ ಮೇಲೆ ಇಟ್ಟಿರುವ ನಂಬಿಕೆಯು ನಮಗೆ ದೊರೆತ ಗೊರವವಾಗಿದೆ. 148 ಬಸ್‌ಗಳ ಈ ಹೆಚ್ಚುವರಿ ಆರ್ಡರ್ ನಮ್ಮ ಸ್ಟಾರ್‌ ಬಸ್‌ ಸಾಧಿಸಿರುವ ಯಶಸ್ಸಿಗೆ ಮತ್ತು ಬೆಂಗಳೂರು ನಗರದಲ್ಲಿ ನೀಡಿರುವ ಉತ್ತಮ ಕಾರ್ಯನಿರ್ವಹಣೆಗೆ ಪುರಾವೆಯಾಗಿದೆ. ಸಮಾಜ ಮತ್ತು ಪರಿಸರಕ್ಕೆ ನೆರವಾಗುವಂತಹ ಹೊಸತನದ ಉತ್ಪನ್ನಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಇಲ್ಲಿಯವರೆಗೆ ಬೆಂಗಳೂರೊಂದರಲ್ಲೇ ಟಾಟಾ ಮೋಟಾರ್ಸ್‌ ನ ಇ- ಬಸ್‌ ಗಳು 2.5 ಕೋಟಿ ಕಿಲೋಮೀಟರ್‌ ದೂರವನ್ನು ಕ್ರಮಿಸಿವೆ. ಈ ಮೂಲಕ ಟೈಲ್‌ ಪೈಪ್ ಹೊರಸೂಸುವಿಕೆಯಲ್ಲಿ ಭಾರಿಕೆ ಇಳಿಕೆಯಾಗಿದ್ದು, ಇದರಿಂದ ಸುಮಾರು 14,000 ಟನ್ ಗಳನ್ನು ಇಂಗಾಲ ಹೊರಸೂಸುವಿಕೆ ಕಡಿಮೆ ಆಗಿದೆ. ಅತ್ಯಾಧುನಿಕ ಉತ್ಪನ್ನಗಳ ಮೂಲಕ ಹೊಸತನ, ಸುಸ್ಥಿರತೆ ಮತ್ತು ನಗರ ಜೀವನ ಸುಧಾರಣೆ ಸಾಧಿಸುವ ಕಂಪನಿಯ ಬದ್ಧತೆಗೆ ಬೆಂಗಳೂರಿನ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್‌ ಗಳ ಯಶಸ್ಸು ಸಾಕ್ಷಿಯಾಗಿದೆ.