Saturday, 10th May 2025

ಸಿದ್ದರಾಮೋತ್ಸವದಲ್ಲಿ ಪಾಲ್ಗೊಂಡವರೆಲ್ಲ ವೋಟ್ ಹಾಕಲ್ಲ: ಭೈರತಿ

ದಾವಣಗೆರೆ: ಸಿದ್ದರಾಮೋತ್ಸವಕ್ಕೆ ಹೋದವರೆಲ್ಲಾ ವೋಟ್ ಹಾಕುತ್ತಾರೆ ಎನ್ನುವು ದೆಲ್ಲಾ ಸುಳ್ಳು, ಜನರು ಪಕ್ಷಾತೀತವಾಗಿ ಅಲ್ಲಿ ಸೇರಿದ್ದರು. ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಕೋಟ್ಯಾಂತರ ಕಾರ್ಯಕರ್ತರಿದ್ದಾರೆ. ಹಾಗಾಗಿ, ನಾವು ಭಯಪಡುವ ಮಾತೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ, ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವಕ್ಕೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಿಂದಲೂ ಜನರು ಹೋಗಿ ದ್ದಾರೆ. ಜನರು ನಾವು ಕರೆದರು ಬರ್ತಾರೆ ಅವರು ಕರೆದರು ಬರುತ್ತಾರೆ. ಅದು ದೊಡ್ಡ ವಿಷಯವಲ್ಲ. ಪ್ರಧಾನಿ ಮೋದಿಯವರು ಬಂದರೂ ಕೂಡ ಜನ ಸೇರುತ್ತಾರೆ ಎಂದರು.

ಜನ ಸೇರಿದ ತಕ್ಷಣ ಅವುಗಳೆಲ್ಲಾ ಮತಗಳಾಗಿ ಪರಿವರ್ತನೆ ಆಗುವುದಿಲ್ಲ, ನಮ್ಮದು ೧೧ ಕೋಟಿ ಕಾರ್ಯಕರ್ತರು ಇರುವ ಪಕ್ಷ, ನಮ್ಮ ಅಭಿವೃದ್ಧಿ ಕೆಲಸಗಳು ಜನರಿಗೆ ನೀಡಿದ ಉತ್ತಮ ಆಡಳಿತ ಕುರಿತಾಗಿ ನಾವೂ ಸಹ ಕಾರ್ಯಕ್ರಮ ಮಾಡುತ್ತೇವೆ. ಸಿದ್ದರಾಮೋತ್ಸವಕ್ಕೆ ಜನರು ಸೇರಿದ ತಕ್ಷಣ ನಾವು ಭಯಪಡುವುದಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬರಲು ಯಾವ ಕ್ರಮ ತೆಗೆದುಕೊಳ್ಳಬೇಕೊ ನಾವದನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಗೃಹಸಚಿವ ಅಮಿತಾ ಷಾ ಈಚೆಗೆ ಬೆಂಗಳೂರಿಗೆ ಬಂದಿದ್ದು ಕೈಗಾರಿಕಾ ಉದ್ಯಮಿಗಳ ಸಭೆಗೆ. ಅಲ್ಲಿ ಸಿದ್ದರಾಮೋತ್ಸವಕ್ಕೆ ಸಂಬಂಧಪಟ್ಟಂತೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.