Friday, 16th May 2025

Bheemakoregaon Celebration: ಚಿಕ್ಕಬಳ್ಳಾಪುರದಲ್ಲಿ ಭೀಮಕೋರೆಗಾಂವ್ ವಿಜಯೋತ್ಸವ ಆಚರಣೆ

ಚಿಕ್ಕಬಳ್ಳಾಪುರ : ನಗರದ ಅಂಬೇಡ್ಕರ್ ವೃತ್ತದಲ್ಲಿ ೨೦೭ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಅಂಬೇಡ್ಕರ್ ವಾದದ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ನಗರದ ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ವೃತ್ತದವರೆಗೆ  ಪುಣೆಯ ಭೀಮಕೋರೆಗಾಂವ್ ಸ್ಥಳದಲ್ಲಿ ನಿರ್ಮಿಸಿ ರುವ ಸ್ತೂಪದ ಪ್ರತಿರೂಪವನ್ನು ಮೆರವಣಿಗೆಯಲ್ಲಿ ತಂದ ದಸಂಸ ಮುಖಂಡರು ಮತ್ತು ಅಂಬೇಡ್ಕರ್ ಅನುಯಾ ಯಿಗಳು ಅಂಬೇಡ್ಕರ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ವಿನೂತನವಾಗಿ ಆಚರಿಸಿದರು.

ಈ ವೇಳೆ ಮಾತನಾಡಿದ ದಸಂಸ ಸಂಘಟನಾ ಸಂಚಾಲಕ ಸುಧಾವೆಂಕಟೇಶ್ ದಲಿತರ ಸ್ವಾಭಿಮಾನದ ಐತಿಹಾಸಿಕ ಅಸ್ಮಿತೆಯ ಪ್ರತೀಕಳಲ್ಲಿ ಒಂದು ಭೀಮ ಕೋರೆಗಾಂವ್ ವಿಜಯೋತ್ಸವ ಆಗಿದೆ. ಶಿವಾಜಿ ಮಹಾರಾಜರ ನಂತರ ಅಧಿಕಾರಕ್ಕೇರಿದ ಪೇಶ್ವೆ ಸಂತತಿ ಶಿವಾಜಿ ಆದರ್ಶಗಳನ್ನು ಮಣ್ಣು ಪಾಲು ಮಾಡಿದಂತೆ ದಲಿತರ ಮೇಲೆ ಅಟ್ಟಹಾಸ ಮೆರಯಿತು. ೨ನೇ ಬಾಜೀರಾಯನ ಅಧಿಕಾರದ ಅವಧಿಯಲ್ಲಿ ಸೈನ್ಯದಲ್ಲಿ  ಮಹರ್ ಮತ್ತು ಮಾಂಗ್ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸದೆ ಅಪಮಾನ ಮಾಡಿದರು.ಇದರಿಂದ ಕಿಡಿಕಿಡಿಯಾದ ಮಹರ್ ಸೈನಿಕರು ಬ್ರಿಟೀಷ್ ಸೈನ್ಯದಲ್ಲಿ ಸೇರಿಕೊಂಡು ೧೮೧೮ರಲ್ಲಿ ನೆಡೆದ ಯುದ್ಧದಲ್ಲಿ ೨೮ಸಾವಿರದಷ್ಟು ಮರಾಠ ಪೇಶ್ವೆಗಳ ಸೈನ್ಯದ ವಿರುದ್ಧ ಮೂಲ ನಿವಾಸಿ ಮಹರ್ ರೆಜಿಮೆಂಟ್‌ನ ೫೦೦ ಯೋಧರು ಸೆಣಸಾಡಿ ವಿಜಯಸಾಧಿಸಿದ ನೆನಪಿನಾರ್ಥವಾಗಿ ಈ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸುತ್ತಾ ಬರಲಾಗಿದೆ ಎಂದರು.

ಈ ಮಹರ್ ಸೈನಿಕರ ವೀರೋಚಿತ ಸ್ವಾಭಿಮಾನದ ಹೋರಾಟದ ಇತಿಹಾಸ ೧೯೨೭ರವರೆಗೂ ಭಾರತದಲ್ಲಿ ಮುಚ್ಚಿ ಹೋಗಿತ್ತು.ಅಂಬೇಡ್ಕರ್ ಲಂಡನ್‌ನಲ್ಲಿ ವ್ಯಾಸಾಂಗ ಮಾಡುವಾಗ ಅಲ್ಲಿನ ಗ್ರಂಥಾಲಯದಲ್ಲಿ ಅವರು ಈ ಸುದ್ದಿ ಓದಿ ಮಹಾರಾಷ್ಟçಕ್ಕೆ ವಾಪಸಾದ ಕೂಡಲೇ ಈಸ್ಥಳಕ್ಕೆ ಭೇಟಿ ನೀಡಿ ಮಹಾರ್ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಅಲ್ಲಿಂದ ಆರಂಭವಾದ ವಿಜಯೋತ್ಸವ ಈತನಕ ಮುಂದುವರೆದು  ಜ್ಞಾನಸೂರ್ಯ ಅಂಬೇಡ್ಕರ್ ನೀಡಿದ ಬೆಳಕಲ್ಲಿ ಲೋಕವನ್ನು ಬೆಳಗುತ್ತಿದೆ ಎಂದರು.

ಜನಚಳವಳಿಯ ಸಂಗಾತಿ ಗ,ನ.ಅಶ್ವತ್ಥ್ ಮಾತನಾಡಿ ೧೮೧೮ರ ಜನವರಿ ೧ ರಂದು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ೯೦೦ ಮಂದಿ ಸೈನಿಕರು ಶಿರೂರಿನಿಂದ ಪುಣೆಗೆ ಆಗಮಿಸುತ್ತಾರೆ.ಆಗ ೨ನೇ ಬಾಜೀರಾವ್‌ನ ೨೦ ಸಾವಿರ ಸೈನಿಕರು ಇವರಿಗೆ ಎದುರಾಗುತ್ತಾರೆ.ಕೋರೆಗಾಂವ್ ಎಂಬ ಸ್ಥಳದಲ್ಲಿ ನಡೆದ  ಈ ಯುದ್ಧ ಹೆಚ್ಚುಕಾಲ ನಡೆಯಲಿಲ್ಲ. ಇದರಲ್ಲಿ ಬ್ರಿಟೀಷರ ೨೦೦ ಸೈನಿಕರು ಪೇಶ್ವೆಯ ೫೦೦ ಸೈನಿಕರು ಮೃತರಾದರು. ಆಂಗ್ಲೋ ಮರಾಠ ಯುದ್ಧದ ಅಂತಿಮ ಗೆಲುವು ಬ್ರಿಟೀಷರದ್ದಾಗಿತ್ತು.ಈ ಸೇನೆಯಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಇದ್ದದ್ದು ಮಹರ್ ಸೈನಿಕರೇ ಎಂಬುದು ಗಮನಾರ್ಹ.ಮೇಲ್ಜಾತಿಯ ಪೇಶ್ವೆ  ಸೇನೆಯ ವಿರುದ್ದ ಮಹಾರ್ ಸೇನೆಯ ಗೆಲುವು ದಲಿತರ ಹೆಮ್ಮೆಗೆ ಕಾರಣವಾಗಿದೆ.ಈ ಇತಿಹಾಸ ಬರೆದ ಬ್ರಿಟೀಷ್ ಅಧಿಕಾರಿ ಹೆನ್ರಿ ಬೇಡನ್ ಪೋವೆಲ್ ಉಲ್ಲೇಖಿಸುವಂತೆ ಮಹಾರರು ಬಲಿಷ್ಟ ದೇಹವುಳ್ಳವರು, ಸುಂದರಾಂಗರು, ಬುದ್ದಿವಂತರು, ಸೂಕ್ಷ್ಮಮತಿಗಳು, ಅಪಾರ ಧೈರ್ಯಶಾಲಿಗಳು ಆಗಿದ್ದಾರೆ ಎಂದು ತಿಳಿಸಿದ್ದಾರೆ.ಇಂತಹ ಮಹಾರರ ಸಮರಕೌಶಲ್ಯವನ್ನು ಗುರುತಿಸಿದ್ದ ಬ್ರಿಟೀಷರು ಗುರುತಿಸಿದ್ದಂತೆ, ಶಿವಾಜಿ ಮಹಾರಾಜರು ಕೂಡ ಗುರುತಿಸಿದ್ದರು ಎಂಬುದು ಜ್ಯೋತಿರಾವ್ ಪುಲೆ ಅವರು ಶಿವಾಜಿ ಕುರಿತು ರಚಿಸಿರುವ ಲಾವಣಿಯಲ್ಲಿ ಉಲ್ಲೇಖವಾಗಿದೆ.ಮೂಲ ನಿವಾಸಿ ದಲಿತರ ಅಚ್ಚಳಿಯದ ಚರಿತ್ರೆಯನ್ನು ಮನುವಾದಿ ಇತಿಹಾಸ ಕಾರರು ಕೀಳಾಗಿ ಚಿತ್ರಿಸಿರುವ ಬಗ್ಗೆ ಯುವಜನತೆ ಅರಿಯಬೇಕಿದೆ ಎಂದರು.

ಈ ವೇಳೆ ಸರ್ದಾರ್ ಚಾಂದ್ ಪಾಷ, ಶ್ರೀನಿವಾಸ್, ಚಿಕ್ಕಪ್ಪಯ್ಯ, ನಾಗರಾಜ್, ವೆಂಕಟರಾಮ್, ವೆಂಕಟೇಶ್, ಸೂಲಿಕುಂಟೆ ವೆಂಕಟೇಶ್, ಎನ್.ಶ್ರೀನಿವಾಶ್, ವೆಂಕಟ್, ಮುನಿರಾಜು, ಆಂಜಿ, ಕೃಷ್ಣಯ್ಯ, ವೆಂಕಟೇಶ್, ಆನಂದ್, ಶಂಕರ್, ಡೇವಿಡ್, ಮಹೇಶ್, ಮುನಿಸ್ವಾಮಿ ಮತ್ತಿತರರು ಇದ್ದರು.