Monday, 12th May 2025

ಅನಿವಾಸಿ ಭಾರತೀಯರು ಮತದಾನ ಮಾಡುವಂತಿಲ್ಲ: ಪಿಐಎಲ್‌ ವಜಾ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕಳೆದ 15 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಮತ್ತು ಸಾಗರೋ ತ್ತರ ಕನ್ನಡಿಗರ ಸಂಘದ ಜಂಟಿ ಕಾರ್ಯದರ್ಶಿ ಎಂ. ರವಿ ಅವರು ಸಲ್ಲಿಸಿದ್ದ ಪಿಎಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಇದ್ದ ರಜಾ ಕಾಲದ ಪೀಠದಿಂದ ಪಿಎಎಲ್ ವಜಾಗೊಳಿಸಿ ಆದೇಶ ನೀಡಲಾಗಿದೆ.

ಆಯೋಗದ ಪರ ವಕೀಲರು ವಾದ ಮಂಡಿಸಿ, ಮತದಾನದ ಹಕ್ಕು ಮೂಲ ಹಕ್ಕಲ್ಲ. ಅದು ಕಾನೂನಿನಿಂದ ರೂಪಿತವಾಗಿದ್ದು, ಎನ್.ಆರ್.ಐ.ಗಳಿಗೆ ಮತದಾನದ ಅವಕಾಶ ಕಲ್ಪಿಸ ಬಹುದಾದ ಕಾನೂನಿನ ಅನುಪಸ್ಥಿತಿಯಲ್ಲಿ ಅವರು ಮತದಾನದ ಹಕ್ಕು ಪಡೆದುಕೊಳ್ಳಲು ಆಗುವುದಿಲ್ಲ ಎಂದು ನ್ಯಾಯ ಪೀಠಕ್ಕೆ ತಿಳಿಸಿದ್ದಾರೆ.

ಇದನ್ನು ಪರಿಗಣಿಸಿದ ನ್ಯಾಯಪೀಠ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ನೀಡಬೇಕು ಎನ್ನುವುದು ದೀರ್ಘಕಾಲದ ಚುನಾವಣಾ ನ್ಯಾಯಶಾಸ್ತ್ರಕ್ಕೆ ವಿರುದ್ಧವಾಗಿದ್ದು, ಹೀಗಾಗಿ ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.