Sunday, 11th May 2025

ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಚಾಲನೆ ನೀಡಿದ ಅಶ್ವಿನಿ ಪುನಿತ್​ ರಾಜ್​​ಕುಮಾರ್

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಲಾಗಿದ್ದು, ಕಂಬಳ ಕೆರೆಗೆ ಯುವರತ್ನ ಡಾ.ಪುನಿತ್​​ ರಾಜ್​​ಕುಮಾರ್​ ಪತ್ನಿ ಅಶ್ವಿನಿ ಪುನಿತ್​ ರಾಜ್​​ಕುಮಾರ್ ಅವರು ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಶನಿವಾರ ಚಾಲನೆ ನೀಡಿದರು.
ಇದಕ್ಕೂ ಮೊದಲು ರಾಜ ಮಹರಾಜ ಹೆಸರಿನ ಕಂಬಳ ಕೆರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೈವ, ದೇವರ ಪ್ರಸಾದ ಕಂಬಳ ಕೆರೆಯ ನೀರಿಗೆ ಅರ್ಪಣೆ ಮಾಡಿ, ಯಾವುದೇ ಅಡ್ಡಿ-ಆತಂಕ ಎದುರಾಗದಂತೆ ಪ್ರಾರ್ಥನೆ ಸಲ್ಲಿಸಿ, ದೀಪ ಬೆಳಗಿಸಿ ಕಾಯಿ ಒಡೆದರು. ಉದ್ಘಾಟನಾ ಕಾರ್ಯ ಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಸಂಸದ ಸದಾನಂದ ಗೌಡ, ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್​ ರೈ ಸಾಕ್ಷಿಯಾದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಪಂದ್ಯಾವಳಿ ಯನ್ನು ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ ಮಾಡಲಾಗಿದೆ. ಅಲ್ಲದೆ, ಸಂಚಾರಿ ಪೊಲೀಸರು ಸಾರ್ವಜನಿಕರು ಕಟ್ಟುನಿಟ್ಟಾಗಿ ಟ್ರಾಫಿಕ್​ ನಿಯಮ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕಂಬಳ ವೀಕ್ಷಣೆಗೆ ಬರುವ ಜನರು ಗೇಟ್ ನಂಬರ್ 1, 2, 3 ಹಾಗೂ 4ರ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ.

ವಿವಿಐಪಿಗಳು ಫನ್ ವರ್ಲ್ಡ್ ಕಡೆಯಿಂದ ಪ್ರವೇಶಿಸಬೇಕು. ಯಾವುದೇ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6:30 ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳ ಮೈದಾನಕ್ಕೆ ಆಗಮಿಸಲಿದ್ದಾರೆ.

ಕರಾವಳಿ ಕಂಬಳ ಉತ್ಸವಕ್ಕೆ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ನಟ ದರ್ಶನ್ ಕಾಂತಾರ ಹೀರೋ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಉಪೇಂದ್ರ, ಶಿವಣ್ಣ, ಆಶಿಶ್ ಬಲ್ಲಾಳ್, ರಾಜ್ ಬಿ ಶೆಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾ ಗುತ್ತಿದ್ದಾರೆ.
ಇಂದು ಮತ್ತು ನಾಳೆ ನಡೆಯಲಿರುವ ಕಂಬಳಕ್ಕೆ ಅನುಷ್ಕಾ ಶೆಟ್ಟಿ, ರಿಷಬ್ ಶೆಟ್ಟಿ, ಪೂಜಾ ಹೆಗ್ಡೆ, ವಿವೇಕ್ ಒಬೆರಾಯ್, ಸೇರಿದಂತೆ ಹಲವು ತಾರೆಯರು ಮೆರಗು ನೀಡಲಿದ್ದಾರೆ.

Leave a Reply

Your email address will not be published. Required fields are marked *