Sunday, 11th May 2025

ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣ: ಸೆ. 5ಕ್ಕೆ ವಿಚಾರಣೆ

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣದ ಅಂತಿಮ ವಿಚಾರಣೆಯನ್ನು ಸೆ. 5ಕ್ಕೆ ನಿಗದಿ ಪಡಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ರಚಿಸಲು ನೀಡಲಾದ ಆದೇಶ ಮತ್ತು ಬೆಂಗಳೂರಿನ ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ದೂರಿಗೆ ಸಂಬಂಧಿಸಿದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಹಾಗೂ ಇತರ ಆರೋಪಿ ಗಳಾದ ಎಸ್‌.ಶ್ರವಣ್‌ ಕುಮಾರ್‌ ಮತ್ತು ಬಿ.ಎಂ. ನರೇಶ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ಗಳನ್ನು ನ್ಯಾ| ಎಸ್‌. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಬೆಂಗಳೂರಿನ ಸದಾಶಿವ ನಗರ ಠಾಣೆಯಲ್ಲಿ ರಮೇಶ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ ಮೇಲ್‌ ಪ್ರಕರಣ ಸಂಬಂಧಿಸಿದ ತನಿಖಾ ವರದಿ ಯನ್ನು ಹೈಕೋರ್ಟಿನ ಅನುಮತಿ ಪಡೆಯದೆ ವಿಚಾರಣಾಧೀನ ನ್ಯಾಯಾ ಲಯಕ್ಕೆ ವಿಶೇಷ ತನಿಖಾ ದಳವು (ಎಸ್‌ಐಟಿ) ಸಲ್ಲಿಸುವಂತಿಲ್ಲ ಎಂದು ನಿರ್ದೇಶಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಉದ್ಭವಿಸುವ ಕಾನೂನು ವಿಚಾರಗಳ ಬಗ್ಗೆ ನ್ಯಾಯಾಲಯಕ್ಕೆ ಸಲಹೆ ಮತ್ತು ನೆರವು ನೀಡಲು ಹಿರಿಯ ವಕೀಲ ಸಂದೇಶ್‌ ಚೌಟ ಅವರನ್ನು ಅಮಿಕಸ್‌ ಕ್ಯೂರಿ ಆಗಿ ನೇಮಿಸಿತು.

ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರು ತಮ್ಮ ವಾದಾಂಶಗಳನ್ನು ಸಂಕ್ಷಿಪ್ತವಾಗಿ ಲಿಖೀತ ರೂಪದಲ್ಲಿ ಸಲ್ಲಿಸಲು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.