Sunday, 11th May 2025

ತಮ್ಮನ್ನು ಪೂರ್ಣ ಬಳಸಿಕೊಂಡಿದ್ದರೆ ಬಿಜೆಪಿ 134 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತಿತ್ತು: ಜನಾರ್ದನ ರೆಡ್ಡಿ

ಬೆಂಗಳೂರು: ಬಿಜೆಪಿ ಪಕ್ಷವು ತಮ್ಮನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪೂರ್ಣ ಬಳಸಿ ಕೊಂಡಿದ್ದೇ ಆಗಿದ್ದರೆ ಬಿಜೆಪಿ 134 ಸ್ಥಾನ ಗೆದ್ದು ಸರಳ ಬಹುಮತದಿಂದ ಸರ್ಕಾರ ರಚನೆ ಮಾಡುತ್ತಿತ್ತು ಎಂದು ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ತಮ್ಮ ಬೆನ್ನಹಿಂದೆ ಜಗಜ್ಯೋತಿ ಬಸವೇಶ್ವರರ ಬೃಹತ್‌ ಪ್ರತಿಮೆ ಹಾಗೂ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಣ್ಣ ಪ್ರತಿಮೆಯನ್ನು ಇರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ, 2018ರ ಚುನಾವಣೆಯಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗಿನ ಮಾತುಕತೆಯನ್ನು ನೆನೆದರು.

ನನ್ನನ್ನು ಮೊಣಕಾಲ್ಮೂರಿಗೆ ಸೀಮಿತ ಮಾಡದೆ ಉತ್ತರ ಕರ್ನಾಟಕ ಭಾಗದಲ್ಲಿ ಬಳಸಿ ಕೊಂಡಿದ್ದರೆ ಕನಿಷ್ಟ 20-30 ಸಾವಿರ ವೋಟುಗಳು ಬೇಕಾದ ಕ್ಷೇತ್ರಗಳಲ್ಲಿ ಹೆಚ್ಚು ಶಾಸಕರು ಬಿಜೆಪಿಯಿಂದ ಗೆದ್ದು ಬರುತ್ತಿದ್ದರು. 104ರ ಬದಲಿಗೆ 134 ಶಾಸಕರು ಜಯಗಳಿಸುತ್ತಿದ್ದರು. 30-40 ವರ್ಷದಿಂದ ಪಕ್ಷಕ್ಕೆ ದುಡಿದ 15-20 ಜನರಿಗೆ ಅಧಿಕಾರ ಸಿಗುತ್ತಿತ್ತು.

ಸರಳ ಬಹುಮತಕ್ಕಿಂತ ಕಡಿಮೆ ಬಂದಿದ್ದರಿಂದ ಈಗ ಹೊರಗಿನಿಂದ ಶಾಸಕರನ್ನು ಕರೆತಂದು ಸರ್ಕಾರ ಮಾಡಲಾಗಿದೆ. ಇದೂ ಒಂದು ರೀತಿಯ ಸಮ್ಮಿಶ್ರ ಸರ್ಕಾರದ ರೀತಿ ಆಗಿದೆ ಎಂದರು.

Read E-Paper click here