Saturday, 10th May 2025

ಫೆಬ್ರವರಿ 17ರಂದು ಬಜೆಟ್ ಮಂಡನೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17ರಂದು ತಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸಲು ನಿರ್ಧರಿಸಿದ್ದು, ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಇದೆ.

ಈ ತಿಂಗಳ 2ನೇ ವಾರದ ನಂತರ ಇಲಾಖಾವಾರು ಸಚಿವರು ಮತ್ತು ಅಧಿಕಾರಿಗಳ ಪ್ರಗತಿ ಪರಿಶೀಲನೆ ಆರಂಭವಾಗಲಿದೆ.

ಜ.1ರಂದು ಹೊಸ ವರ್ಷದ ಶುಭಾಷಯ ಕೋರಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತಿತರರಿಗೆ ಬಜೆಟ್ ಮಂಡನೆಯ ಪೂರ್ವ ಸಿದ್ದತೆಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ತಿಂಗಳ 2ನೇ ವಾರದಲ್ಲಿ ಪ್ರಸಕ್ತ ವರ್ಷದ ಜಂಟಿ ಅಧಿವೇಶನ ನಂತರ ಬಜೆಟ್ ಮಂಡನೆ ಯಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಈ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿರುವ ಸರ್ಕಾರ ಜಂಟಿ ಅಧಿವೇಶನ ಮತ್ತು ಬಜೆಟ್ ಮಂಡನೆಯನ್ನು ಏಕಕಾಲದಲ್ಲಿ ನಡೆಸಲು ಮುಂದಾಗಿದೆ.

ಫೆ16ರಂದು ಗುರುವಾರ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಸಿಎಂ ಬೊಮ್ಮಾಯಿ ಅವರು ಶುಕ್ರವಾರ ಬಜೆಟ್ ಮಂಡಿಸಿ ನಂತರ ಸೋಮವಾರದಿಂದ ಬಜೆಟ್ ಮೇಲೆ ಚರ್ಚೆ ಆರಂಭವಾಗಲಿದೆ.

ಈ ಬಾರಿ ಸಿಎಂ ಬೊಮ್ಮಾಯಿ ಹೆಚ್ಚುವರಿ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಲಾಕ್‍ ಡೌನ್ ಹಿನ್ನೆಲೆ ಆದಾಯ ಕೊರತೆಯ ಬಜೆಟ್ ಮಂಡನೆಯಾಗಿತ್ತು.

2022-23 ಸಾಲಿನ ಮೊದಲಾರ್ಧ ವರ್ಷದಲ್ಲಿ ರಾಜ್ಯದ ಬೊಕ್ಕಸಕ್ಕೆ 1 ಲಕ್ಷ ಕೋಟಿಗೂ ಅಧಿಕ ರಾಜಸ್ವ ಸ್ವೀಕೃತಿಯಾಗಿದೆ. ಇದರಲ್ಲಿ ಕೇಂದ್ರದ ಸಹಾಯಾನುದಾನ, ತೆರಿಗೆ ಪಾಲು ಸೇರಿದೆ. ಇತ್ತ ಜಿಎಸ್‍ಟಿ ಸಂಗ್ರಹ ನಿರೀಕ್ಷೆಗೂ ಮೀರಿ ಸಂಗ್ರಹವಾಗುತ್ತಿದೆ.

 
Read E-Paper click here