Saturday, 10th May 2025

Actor Darshan: ದರ್ಶನ್‌ ಶೂಗಳಲ್ಲಿ ಸಿಕ್ಕಿತು ಮಹತ್ವದ ಸಾಕ್ಷಿ! ನಟನಿಗೆ ಮತ್ತೊಂದು ಸಂಕಷ್ಟ

Actor Darshan

ಬೆಂಗಳೂರು: ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ (renuka swamy murder) ಪ್ರಕರಣದಲ್ಲಿ, ಆರೋಪಿ ದರ್ಶನ್‌ ವಿರುದ್ಧ ಮತ್ತೊಂದು ಮಹತ್ವದ ಸಾಕ್ಷಿ ಲಭ್ಯವಾಗಿದೆ. ಇದು ನಟನಿಗೆ ಕಂಟಕವಾಗಿ ಪರಿಣಮಿಸಲಿದೆ.

ರೇಣುಕಾ ಸ್ವಾಮಿ ಮೇಲೆ ನಡೆಸಲಾದ ಚಿತ್ರಹಿಂಸೆಯಲ್ಲಿ ದರ್ಶನ್‌ ಪಾತ್ರವೂ ಇದೆಯೆಂದು ಹೇಳಲಾಗಿತ್ತು. ಆದರೆ ಅದಕ್ಕೆ ಪೂರಕ ಸಾಕ್ಷಿಗಳು ಸಿಕ್ಕಿರಲಿಲ್ಲ. ಇದೀಗ ಎವಿಡೆನ್ಸ್‌ಗಳ ಮೇಲೆ ನಡೆಸಲಾದ ಲೂಮಿನಲ್ ಟೆಸ್ಟ್‌ನಲ್ಲಿ ಪೂರಕ ಸಾಕ್ಷಿ ದೊರೆತಿದೆ. ದರ್ಶನ್ ಧರಿಸಿದ್ದ ಶೂಗಳೇ ಇದೀಗ ಪ್ರಮುಖ ಸಾಕ್ಷಿ ಆಗಲಿವೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ದರ್ಶನ್ ಶೂಗಳನ್ನು ಲೂಮಿನಲ್ ಟೆಸ್ಟ್‌ಗೆ ಕಾಮಾಕ್ಷಿಪಾಳ್ಯ ಪೊಲೀಸರು ಕಳಿಸಿದ್ದರು. ಲೂಮಿನಲ್ ಟೆಸ್ಟ್ ವೇಳೆ ದರ್ಶನ್ ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಇದು ಮೂರನೇ ಮುಖ್ಯ ಎವಿಡೆನ್ಸ್ ಆಗಿ ದೊರೆತಿದೆ.

ಈ ಹಿಂದೆ ದರ್ಶನ್ ಟಿ ಶರ್ಟ್ ಮೇಲೂ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗಿದ್ದವು. ಇದನ್ನು ಹಲ್ಲೆಯ ಸಂದರ್ಭದಲ್ಲಿ ದರ್ಶನ್‌ ಧರಿಸಿದ್ದರು. ಇದೀಗ ದರ್ಶನ್ ಧರಿಸಿದ್ದ ಟೀಶರ್ಟ್, ಪ್ಯಾಂಟ್, ಬೆಲ್ಟ್‌ ಜೊತೆಗೆ ಶೂ ಕೂಡ ಪ್ರಮುಖ ಸಾಕ್ಷ್ಯಗಳಾಗಿವೆ. ಬೆಲ್ಟ್‌ನಿಂದ ರೇಣುಕಾಸ್ವಾಮಿ ಮೇಲೆ ಹೊಡೆದಿದ್ದ, ಶೂಗಳಿಂದ ಒದ್ದಿದ್ದ ಬಗೆ ದೂರಲಾಗಿತ್ತು. ಹೀಗಾಗಿ ಅದೂ ಸಾಕ್ಷಿಯಾಗಿದೆ.

ಚಾರ್ಜ್ ಶೀಟ್‌ನಲ್ಲಿ ಈ ಮೂರು ವಸ್ತುಗಳ ಬಗ್ಗೆ ಪೊಲೀಸರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ‌ದರ್ಶನ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಜ್ಜಾಗಿದ್ದಾರೆ. ಚಾರ್ಜ್‌ಶೀಟ್‌ ಪುಟಗಳ ಸಂಖ್ಯೆ 4800ಕ್ಕೂ ಮೀರಿದೆ ಎಂದು ತಿಳಿದುಬಂದಿದೆ. ಎಸ್ಪಿಪಿ ಪ್ರಸನ್ನಕುಮಾರ್ ಮುಖಾಂತರ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.

Leave a Reply

Your email address will not be published. Required fields are marked *