Saturday, 10th May 2025

Basavaraj Bommai: ಹಿಂದಿನ ಸವಾಲುಗಳೇ ಇದೀಗ ಸಾಧನೆಯ ಮೆಟ್ಟಿಲುಗಳಾಗಿವೆ: ಬಸವರಾಜ ಬೊಮ್ಮಾಯಿ

ಸಾಂಸ್ಥಿಕ ಆಡಳಿತ ವಲಯದಲ್ಲಿ ಐಸಿಎಸ್ಐ ಉತ್ಕೃಷ್ಟ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೆಂಗಳೂರು; ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾಗಿದ್ದು, ಭಾರತದ ಹಿಂದಿನ ಅತಿ ನಿರೀಕ್ಷೆ, ಸವಾಲುಗಳು ಈಗ ಸಾಧನೆಯ ಮೆಟ್ಟಿಲುಗಳಾಗಿವೆ. ಇದೀಗ ಯಾವುದೇ ಚಮತ್ಕಾರ ನಡೆಯುತ್ತಿಲ್ಲ. ಎಲ್ಲವೂ ಫಲಿತಾಂಶವಾಗಿ ಪರಿವರ್ತನೆ ಹೊಂದುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಐಟಿಸಿ ಗಾರ್ಡೇನಿಯಾದಲ್ಲಿ ಸಾಂಸ್ಥಿಕ [ಕಾರ್ಪೋರೆಟ್] ಆಡಳಿತ ವಲಯದಲ್ಲಿ ಐಸಿಎಸ್ಐ ಉತ್ಕೃಷ್ಟ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ, ಕಂಪೆನಿ ಸೆಕ್ರೆಟರಿ ವಿಷಯ ಕುರಿತ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ದೇಶ ಒಂದೆರೆಡು ಉದ್ಯಮಿಗಳಿಂದ ನಡೆಯುತ್ತಿಲ್ಲ. ಉತ್ತಮ ಉದ್ಯಮಶೀಲತೆಯಿಂದ ಪ್ರಗತಿಯಾಗುತ್ತಿದೆ ಎಂದರು.

ಮನುಷ್ಯ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣ ಹೊಂದಿದ್ದು, ವ್ಯಾಪಾರ ವಹಿವಾಟು ಇದಕ್ಕಿಂತ ಭಿನ್ನ ವಾಗಿಲ್ಲ. ಇದೇ ರೀತಿಯಲ್ಲಿ ಕಂಪೆನಿ ಸೆಕ್ರೇಟರಿಗಳು ನಿಯಂತ್ರಣವಷ್ಟೇ ಅಲ್ಲದೇ ಪರಿಸರಕ್ಕೆ ತಕ್ಕಂತೆ ಹೊಂದಿ ಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಂಡು ಲಾಭ ನಷ್ಟದ ಪ್ರತೀಕಗಲಾಗಿ ಹೊರ ಹೊಮ್ಮಿದ್ದಾರೆ. ಸಂಪೂರ್ಣ ಪರಿಸರ ವ್ಯವಸ್ಥೆ ಇದೀಗ ಸಾಧ್ಯತೆಗಳಾಗಿದ್ದು, ಬರುವ 2047 ರ ವೇಳೆಗೆ ದೇಶ ಎಲ್ಲಾ ವಲಯಗಳಲ್ಲಿ ಮುಂಚೂಣಿಗೆ ಬರಲಿದೆ. ಭಾರತದ ಭವಿಷ್ಯ ಉಜ್ವಲವಾಗಿದೆ. ಜೀವನದಲ್ಲಿ ಮುಂದೆ ಬರಬೇಕು ಎನ್ನುವವರಿಗೆ ಇದು ಉತ್ತಮ ಅವಕಾಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದ್ದು, ಬದಲಾವಣೆ ತರುತ್ತಾರೆ ಎನ್ನುವ ನಂಬಿಕೆ ದೇಶದ ಜನರಲ್ಲಿದೆ. 25 ಕೋಟಿ ಜನ ಬಡತನ ರೇಖೆಯಿಂದ ಹೊರ ಬಂದಿರುವುದೇ ಇದಕ್ಕೆ ನಿದರ್ಶನ ಎಂದರು.

ಮಧುಸೂಧನ್ ಸಾಯಿ ಜಾಗತಿಕ ಮಾನವೀಯ ಅಭಿಯಾನದ ಸಂಸ್ಥಾಪಕರಾದ ಮಧುಸೂಧನ್ ಸಾಯಿ ಮಾತನಾಡಿ, 1 ರಿಂದ 10 ನೇ ತರಗತಿಯ 56 ಲಕ್ಷ ವಿದ್ಯಾರ್ಥಿಗಳಿಗೆ ಪೌಷ್ಟಿಕಯುಕ್ತ ರಾಗಿ, ತೃಣಧಾನ್ಯಗಳನ್ನೊಳ ಗೊಂಡ ಆಹಾರ ಒದಗಿಸಲಾಗುತ್ತಿದೆ. ತುಮಕೂರು ಜಿಲ್ಲೆಯ ರೈತರು ಸಿರಿಧಾನ್ಯಗಳನ್ನು ಒದಗಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿದೆ. ಆರೋಗ್ಯ ಸುಧಾರಿಸಿದೆ. ಸಿಎಸ್ಆರ್ ಚಟುವಟಿಕೆಗಳಿಗೆ ಕಾರ್ಪೋರೇಟ್ ವಲಯ ಮತ್ತಷ್ಟು ಬೆಂಬಲ ನೀಡಬೇಕು ಎಂದರು.

ಐಸಿಎಸ್ಐ ಉಪಾಧ್ಯಕ್ಷ ಸಿ.ಎಸ್. ಧನಂಜಯ್ ಶುಕ್ಲಾ ಮಾತನಾಡಿ, ದೇಶಾದ್ಯಂತ ಕಂಪೆನಿ ಸೆಕ್ರೇಟರಿ ವಲಯದಲ್ಲಿ 75 ಸಾವಿರ ಸದಸ್ಯರಿದ್ದು, ಕಾರ್ಪೋರೆಟ್ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ನಿರ್ಣಾ ಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಶೀಘ್ರದಲ್ಲೇ ಕಂಪೆನಿಗಳ ನಡುವಿನ ವ್ಯಾಜ್ಯ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಕೇಂದ್ರ ಪ್ರಾರಂಭವಾಗಲಿದೆ ಎಂದರು.

ಐಸಿಎಸ್ಐ ಕಾರ್ಯದರ್ಶಿ ಆಶಿಶ್ ಮೋಹನ್ ಮಾತನಾಡಿ, ಸಾಂಸ್ಥಿಕ ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಕಂಪೆನಿಗಳು ಮತ್ತು ವ್ಯಕ್ತಿಗಳನ್ನು ಗುರುತಿಸಲು ನಿವೃತ್ತ ನ್ಯಾಯಮೂರ್ತಿ ಸದಾಶಿವ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಆಡಳಿತ ವ್ಯವಸ್ಥೆಯಲ್ಲಿ ಹೊಸ ಪರಂಪರೆ, ಉನ್ನತ ಸಾಧನೆ ಮಾಡಿರುವವನ್ನು ಗುರುತಿಸಲಾಗಿದೆ. ಇಡೀ ವರ್ಷ ಈ ಪ್ರಕ್ರಿಯೆ ನಡೆಸಿದ್ದು, ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದು ಬುನಾದಿಯಾಗಲಿದೆ ಎಂದರು.

ಐಸಿಎಸ್ಐ ಅಧ್ಯಕ್ಷ ಬಿ. ನರಸಿಂಹನ್, ಐಸಿಎಸ್ಐ ಮಾಜಿ ಅಧ್ಯಕ್ಷ ಸಿ.ಎಸ್. ಮನೀಶ್ ಗುಪ್ತಾ, ಐಸಿಎಸ್ಐ ಕೇಂದ್ರೀಯ ಮಂಡಳಿ ಸದಸ್ಯ ಸಿ.ಎಸ್. ದ್ವಾರಕಾನಾಥ್ ಚೆನ್ನೂರ್ ಮತ್ತಿತರರು ಉಪಸ್ಥಿತರಿದ್ದರು.

ನಾವು ಅತಿ ಹೆಚ್ಚು ಆಶೀರ್ವದಿಸಿದ ಜೀವಿಗಳು. ಅತಿ ಹೆಚ್ಚು ದೀರ್ಘಕಾಲ ಉಳಿಯುವ ಜೀವಿಗಳು.