ವರ್ಷದ ಹಿಂದೆ ಸಿ.ಎಂ.ಸಿದ್ದರಾಮಯ್ಯ ನೀಡಿದ್ದ ಭರವಸೆ ಈಡೇರಿಸುವಂತೆ ಆಗ್ರಹ
ಬೆಳಗಾಂ ಅಧಿವೇಶನದಲ್ಲಿ ಬೇಡಿಕೆ ಈಡೇರದಿದ್ದರೆ ಜನವರಿ 7 ರಿಂದ ಅನಿರ್ದಿಷ್ಟ ಹೋರಾಟ ಎಚ್ಚರಿಕೆ
ಚಿಕ್ಕಬಳ್ಳಾಪುರ: ಬೆಳಗಾವಿ ಅಧಿವೇಶನದಲ್ಲಿ ಅಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ೧೫ ಸಾವಿರ ಏರಿಕೆ ಮಾಡಿ ಆದೇಶ ಹೊರಡಿಸಲಿಲ್ಲ ಎಂದು ೨೦೨೫ರ ಜನವರಿಯಿಂದಲೇ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿ ಕೊಳ್ಳುವುದಾಗಿ ಆಶಾ ಕಾರ್ಯಕರ್ತೆಯರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಎಐಯುಟಿಯುಸಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿ ಸರಕಾರದ ಗಮನ ಸೆಳೆದರು.
ಬೆಂಗಳೂರಿನಲ್ಲಿ ವರ್ಷದ ಹಿಂದೆ ಆಶಾ ಕಾರ್ಯಕರ್ತೆಯರು ನಡೆಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ನೀಡಿದ್ದ ಭರವಸೆಯಂತೆ ಈಗಿರುವ ವೇತನಕ್ಕೆ ೩ ಸಾವಿರಕ್ಕೆ ಈಡೇರಿಸಿ ನುಡಿದಂತೆ ನಡೆವ ಸರಕಾರ ಎನ್ನಿಸಿಕೊಳ್ಳಬೇಕು.ಬೆಳಗಾಂ ಅಧಿವೇಶನದಲ್ಲಾದರೂ ಪ್ರಥಮ ಆಧ್ಯತೆಯಾಗಿ ಆಶಾ ಕಾರ್ಯಕರ್ತರ ವಿಷಯವನ್ನು ಚರ್ಚೆಗೆ ಎತ್ತಿಕೊಂಡು ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ನೂತನ ವರ್ಷ ೨೦೨೫ ಜನವರಿ ಯಿಂದಲೇ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಮಾಡುವುದಾಗಿ ಒತ್ತಾಯಿಸಿದರು.
ಪ್ರಮುಖ ಹಕ್ಕೊತ್ತಾಯಗಳು:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಈಗಿರುವ ಆಶಾ ಕಾರ್ಯಕರ್ತೆಯರಿಗೆ ಇರುವ ಗೌರವಧನ ಮತ್ತು ಪ್ರೋತ್ಸಾಹ ಧನ ಸೇರಿಸಿ ಒಟ್ಟು ರೂ.೧೨೦೦೦ ಮತ್ತು ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ರೂ ೩೦೦೦ ಹೆಚ್ಚಳ ಸೇರಿಸಿ, ಒಟ್ಟು ರೂ. ೧೫೦೦೦ ಮಾಸಿಕ ಗೌರವಧನ ನಿಗದಿಯಾಗಬೇಕು.
ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣ ವಾಗಿ ಕನಿಷ್ಠ ರೂ.೨೦೦೦ರಷ್ಟು ಗೌರವಧನವನ್ನು ಹೆಚ್ಚಿಗೆ ಮಾಡಬೇಕು.ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕ ವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಿ. ಅಥವಾ ಮೊಬೈಲ್ ಡಾಟಾ ಒದಗಿಸಿ, ಮೊಬೈಲ್ ಕೆಲಸ ಗಳಿಗೆ ಪ್ರೋತ್ಸಾಹಧನ ನಿಗದಿ ಮಾಡಿ.ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ. ೬೦ ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ರೂ.೩ ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸಂಘದ ಮುಖಂಡರಾದ ಶಿಲ್ಪ ಮಾತನಾಡಿ ರಾಜ್ಯದ ಆಶಾ ಕಾರ್ಯಕರ್ತೆಯರಾದ ನಾವು ಹಗಲಿರುಳು ಬಡಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಿ ಕೊಡಲು ಆರೋಗ್ಯ ಇಲಾಖೆಯಲ್ಲಿ ಪರಿಶ್ರಮಿಸುತ್ತಿರುವುದು ನಿಮಗೆ ತಿಳಿದಿದೆ. ನಮ್ಮಂತೆಯೇ ರಾಜ್ಯದಲ್ಲಿ ಸರಿ ಸುಮಾರು ೪೨.೦೦೦ ಆಶಾ ಕಾರ್ಯಕರ್ತೆಯರು ಮಹತ್ತರವಾದ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ. ಹಳ್ಳಿ ಮತ್ತು ನಗರದ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸಿ ಸಮಗ್ರ ಅಭಿವೃದ್ಧಿಯ ಕುರಿತು ಸಮಾಜದ ಆರೋಗ್ಯಕರ ಬದಲಾವಣೆಗೆ ಮಹತ್ವದ ಪಾತ್ರವನ್ನು ವಹಿಸುತ್ತಿದ್ದೇವೆ.
ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ ೩ ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರೊಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು. ಆತಾ ಸೇವೆಯಲ್ಲಿ ಇದ್ದಾಗ ಆಗುವ ಅನಾಹುತಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕಪ್ರತೀ ವರ್ಷ ಪ್ರತೀ ಆಶಾ ಕಾರ್ಯಕರ್ತೆಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆಗಳಿದ್ದಲ್ಲಿ ಕೂಡಲೇ ಉಚಿತ ಚಿಕಿತ್ಸೆ ಮಾಡಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಚ್ಯುಟಿ, ಪಿಎಫ್-ಇಎಸ್ ಐ ಸೌಲಭ್ಯ ನೀಡಬೇಕು. ಜನವರಿ ೭ ರಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಕೈಗೆತ್ತಿ ಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷೆ ಸರಸ್ವತಿ,ಕಾರ್ಯದರ್ಶಿ ರೇಷ್ಮಾ,ಗೌರಿಬಿದನೂರು ತಾಲೂಕು ಆಧ್ಯಕ್ಷೆ ಕೃಷ್ಣವೇಣಿ, ಲಲಿತಮ್ಮ, ಕವಿತಾ, ಗಂಗರತ್ನಮ್ಮ ಇತರರು ಇದ್ದರು.