Thursday, 15th May 2025

Achievement: 65ರ ಪ್ರಾಯದಲ್ಲಿಯೂ ಜಲಸ್ತಂಬನ ವಿದ್ಯೆ ಪ್ರದರ್ಶಿಸಲು ಮುಂದಾದ ಬಿ.ಎಸ್.ಪ್ರಸಾದ್

ಚಿಕ್ಕಬಳ್ಳಾಪುರ : ಪ್ರಾಚೀನ ಜೀವರಕ್ಷಣ ಕಲೆಯಾದ ಜಲಸ್ತಂಬನ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ 65ರ ಪ್ರಾಯದ ಬಿ.ಎಸ್.ಪ್ರಸಾದ್ ಈ ವಿದ್ಯೆ ನನ್ನೊಂದಿಗೆ ಮಣ್ಣಾಗಬಾರದು ಎಂಬ ಉದ್ದೇಶದಿಂದ ಕೊರೆಯುವ ಚಳಿ ಯಲ್ಲಿಯೂ ಕೂಡ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳಕ್ಕೆ ಇಳಿದು ಮಾಧ್ಯಮದವರ  ಎದುರು ಪ್ರದರ್ಶನ ಮಾಡುವ ಮೂಲಕ ಸೈ ಎನಿಸಿಕೊಂಡು ಎಲ್ಲರ ಗಮನ ಸೆಳೆದರು.

ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಗುರುವಾರ ಮಧ್ಯಾಹ್ನ ೨ಗಂಟೆಯಲ್ಲಿ ಮಾಧ್ಯಮದವರ ಸಮ್ಮುಖ ದಲ್ಲಿ ತಮ್ಮ ಪರಂಪರಾಗತ ಜೀವರಕ್ಷಣಾ ಕಲೆಯಾದ ಜಲಸ್ತಂಬನ ವಿದ್ಯೆಯನ್ನು ಪ್ರದರ್ಶನ ಮಾಡಿದ್ದಲ್ಲದೆ ಈ ವಿದ್ಯೆ ಕಲಿಯಲು ಆಸಕ್ತಿ ತೋರುವವರಿಗೆ ಉಚಿತವಾಗಿ ಕಲಿಸುವ ಹಂಬಲವಿರುವುದಾಗಿ ತಿಳಿಸಿದ ಅವರು ಕಲಿಕೆಗೆ ವಯೋಮಿತಿಯ ಅಂತರವಿಲ್ಲ,ಆಸಕ್ತಿಯಿದ್ದರೆ ಸಾಕು ಎಂಬುದನ್ನು ಹೇಳಲು ಮರೆಯಲಿಲ್ಲ.

ಹೊಸೂರು ತಾಲೂಕು ಬಾಗಲೂರು ಗ್ರಾಮಕ್ಕೆ ಸೇರಿದ ಲಿಂಗಾಯಿತ ಸಮುದಾಯದ ಬಿ.ಎಸ್.ಶಿವಪ್ರಸಾದ್ ಕಳೆದ ೩೫ ವರ್ಷಗಳಿಂದ ನಾಡಿನ ಉದ್ದಗಲಕ್ಕೂ ಸಂಚರಿಸಿ ಅವಕಾಶ ಸಿಕ್ಕ ಎಡೆಯಲ್ಲೆಲ್ಲಾ ಜಲಸ್ತಂಬನ ವಿದ್ಯೆ ಪ್ರದರ್ಶಿಸಿ ದ್ದಾರೆ. ಬೆಂಗಳೂರಿನಲ್ಲಿರುವ ಜನರಲ್ ತಿಮ್ಮಯ್ಯ ಸಾಹಸಕಲೆಗಳ ಅಕಾಡೆಮಿ ಇವರ ಸಾಹಸ ಕಲೆಯನ್ನು ಪ್ರಶಂಸಿಸಿ ಪ್ರಮಾಣ ಪತ್ರ ಕೂಡ ನೀಡಿದ್ದಾರೆ.ಆಂಧ್ರ ಪ್ರದೇಶದಲ್ಲಿಯೂ ಕೂಡ ಪ್ರದರ್ಶನ ನೀಡಿರುವುದು ಮತ್ತೊಂದು ಹೆಗ್ಗಳಿಕೆ.

ಜಲಸ್ತಂಬನ ವಿದ್ಯೆಯ ಬಗ್ಗೆ ಮಹಾಭಾರತದಲ್ಲಿ ಕೂಡ ಉಲ್ಲೇಖವಿದೆ.ಇದೊಂದು ಜೀವರಕ್ಷಣಾ ಕಲೆಯಾಗಿದ್ದು ನಮ್ಮ ಪರಂಪರೆ ಉಳಿಸಿರುವ ಬಹುದೊಡ್ಡ ಕಲೆಯಾಗಿದೆ.ದುರ್ಯೋಧನ ಪಾಂಡವರಿಂದ ತಪ್ಪಿಸಿಕೊಂಡು ವೈಶಂಪಾಯನ ಸರೋವರದ ತಳದಲ್ಲಿ ಕುಳಿತಿದ್ದಿದ್ದು ಕೂಡ ಇದೇ ವಿದ್ಯೆಯ ಬಲದಿಂದಲೇ ಆಗಿದೆ.ನೀರಿನ ಮೇಲೆ ತೇಲುವುದು ಸುಲಭವಲ್ಲ.ಅಭ್ಯಾಸ ಬೇಕೇ ಬೇಕು. ಗುರುಮುಖೇನ ಈ ವಿದ್ಯೆ ಕಲಿತರೆ ಯಶಸ್ವಿಯಾಗಿ ಕಲಿಯ ಬಹುದು. ಎಂತಹುದೇ ಜಲಗಂಡಾAತರ ಎದುರಾದಾಗಲೂ ಭಯವಿಲ್ಲದೆ ತಮ್ಮ ಜೀವ ಉಳಿಸಿಕೊಳ್ಳಬಹುದು ಎಂದು ಹೇಳುವ ಹಿರಿಯ ನಾಗರೀಕರಾದ ಶಿವ ಪ್ರಸಾದ್ ನನ್ನ ಬಳಿ ಜಲಸ್ತಂಬನ ವಿದ್ಯೆ ಕಲಿಯಲು ಆಸಕ್ತಿ ಇರುವವರು ಮೊಬೈಲ್ ನಂಬರ್- ೯೯೯೪೮೧೨೪೭೯ಗೆ ಕರೆ ಮಾಡಬಹುದು ಎಂದು ವಿನಂತಿಸಿಕೊಳ್ಳುತ್ತಾರೆ.

ಕೆರೆಕುAಟೆ ಬಾವಿಗಳು ಬತ್ತಿರುವ ಈ ಸಂದರ್ಭದಲ್ಲಿ ಜಲಸ್ತಂಬನ ವಿದ್ಯೆ ಕಲಿಸುವುದು ಸಾಹಸವೇ ಸರಿ.ಆದರೂ  ಯಾರಾದರೂ ಸಂಘ ಸಂಸ್ಥೆಗಳೋ, ದಾನಿಗಳೋ ಮುಂದೆ ಬಂದು ಈಜು ಕೊಳದಲ್ಲಿ ತರಬೇತಿಗೆ ವ್ಯವಸ್ಥೆ ಮಾಡಿಕೊಟ್ಟು ಈ ಕಲೆಗೆ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಉಚಿತವಾಗಿ ನಾನು ಈ ಕಲೆಯನ್ನು ಯುವ ಸಮು ದಾಯಕ್ಕೆ ಪ್ರತಿಫಲಾಪೇಕ್ಷೆಯಿಲ್ಲದೆ ಕಲಿಸಲು ಸಿದ್ಧ ಎಂಬುದನ್ನು ಹೇಳಲು ಮರೆಯಲಿಲ್ಲ.

ಏನೇ ಆಗಲಿ ಭಾರತೀಯ ಸಂಸ್ಕೃತಿ ಆಚಾರ ವಿಚಾರ ಎಂದು ಬಾಯಿಬಾಯಿ ಬಡಿದುಕೊಳ್ಳುವ ದೇಶಪ್ರೇಮಿಗಲೇ ಮೊದಲಾಗಿ ಆರೋಗ್ಯವಂತ ಸಮಾಜ ಕಟ್ಟಲು ಆಸಕ್ತಿಯಿರುವವರು ಈ ಕೂಡಲೇ ಈ ವಯೋವೃದ್ಧರು ಉಚಿತವಾಗಿ ಕಲಿಸಲು ಮುಂದೆ ಬಂದಿರುವ ಸಂದರ್ಭವನ್ನು ಉಪಯೋಗಿಸಿಕೊಳ್ಳಬೇಕಿದೆ. ಪ್ರಾಚೀನ ಜಲಸ್ತಂಬನ ವಿದ್ಯೆ ಕಲಿಸಲು ವ್ಯವಸ್ಥೆ ಮಾಡುವ ಮೂಲಕ ನಗರದ ಯುವಕರಿಗೆ ಪ್ರಾಚೀನ ವಿದ್ಯೆಯನ್ನು ಧಾರೆಯೆರೆಯಲು ಮುಂದಾಗಬೇಕಿದೆ ಎನ್ನುವುದು ವಿಶ್ವವಾಣಿ ಪತ್ರಿಕೆಯ ಕಳಕಳಿಯಾಗಿದೆ.