Wednesday, 14th May 2025

Viral Video: ಚಾಕು ತೋರಿಸಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಕಿಡಿಗೇಡಿ ಪ್ರಯಾಣಿಕ; ಕೊನೆಗೆ ಆಗಿದ್ದೇನು ಗೊತ್ತಾ? ವಿಡಿಯೋ ಇದೆ

Copa Airlines

ಬ್ರೆಜಿಲ್‌: ಕೋಪಾ ಏರ್‌ಲೈನ್ಸ್‌(Copa Airlines) ವಿಮಾನದ ತುರ್ತು ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬನ ಮೇಲೆ ಸಹ ಪ್ರಯಾಣಿಕರು ಹಲ್ಲೆ ನಡೆಸಿದ್ದಾರೆ. ಬ್ರೆಜಿಲ್‍ನಿಂದ ಪನಾಮಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿಮಾನವು ಲ್ಯಾಂಡ್‌ ಆಗುವ 30 ನಿಮಿಷಗಳ ಮೊದಲು ವ್ಯಕ್ತಿಯೊಬ್ಬ ತನ್ನ ಫುಡ್ ಟ್ರೇಯಿಂದ ಪ್ಲಾಸ್ಟಿಕ್ ಚಾಕುವನ್ನು ತೆಗೆದುಕೊಂಡು ವಿಮಾನದ ಹಿಂಭಾಗಕ್ಕೆ ಹೋಗಿ ವಿಮಾನದ ಬಾಗಿಲು ತೆರೆಯುವಂತೆ  ಫ್ಲೈಟ್ ಅಟೆಂಡೆಂಟ್‍ಗೆ ಚಾಕು ತೋರಿಸಿ ಹೆದರಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ

ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಈ ಘಟನೆಯ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೊದಲ್ಲಿ, ವಿಮಾನ ಲ್ಯಾಂಡ್‌ ಆಗುವ 30 ನಿಮಿಷಗಳ ಮೊದಲು ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಪ್ರಯಾಣಿಕನನ್ನು ಇತರ ಪ್ರಯಾಣಿಕರು ತಡೆದಿದ್ದಾರೆ.

ಅಲ್ಲಿ ನಡೆದ ಘಟನೆಯ ಬಗ್ಗೆ ಫೋಟೋ ಜರ್ನಲಿಸ್ಟ್ ಕ್ರಿಸ್ಟಿಯಾನೊ ಕಾರ್ವಾಲ್ಹೋ ಅವರು ಮಾಹಿತಿ ನೀಡಿದ್ದಾರೆ. ಅವರು ತಿಳಿಸಿದಂತೆ , ಚಾಕು ಹಿಡಿದ ವ್ಯಕ್ತಿಯೊಬ್ಬ ವಿಮಾನ ಲ್ಯಾಂಡ್‌ ಆಗುವ ಮೊದಲು ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದನಂತೆ. ಫ್ಲೈಟ್‌ನಲ್ಲಿರುವವರು ಎಷ್ಟೇ ಎಚ್ಚರಿಕೆ ನೀಡಿದರೂ ಕೂಡ ಕೇಳಲಿಲ್ಲವಂತೆ. ಕೊನೆಗೆ ಸಹ ಪ್ರಯಾಣಿಕರು ಬಂದು ವಿಮಾನದ ತುರ್ತು ಬಾಗಿಲನ್ನು ತೆರೆಯದಂತೆ ತಡೆಯಲು ಆ ವ್ಯಕ್ತಿಯೊಂದಿಗೆ ಹೋರಾಡಿದ್ದಾರೆ. ಆರಂಭದಲ್ಲಿ ಆತನನ್ನು ತಡೆಯಲು  ಸಹ ಪ್ರಯಾಣಿಕರು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ಅಂತಿಮವಾಗಿ ಆತನಿಗೆ ರಕ್ತ ಬರುವಂತೆ ಹೊಡೆದು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಪನಾಮದಲ್ಲಿ ಇಳಿದ ನಂತರ ರಾಷ್ಟ್ರೀಯ ಭದ್ರತಾ ತಂಡವು ವಿಮಾನವನ್ನು ಪ್ರವೇಶಿಸಿ ಪ್ರಯಾಣಿಕನನ್ನು ವಶಕ್ಕೆ ಪಡೆದು  ನ್ಯಾಯಾಂಗ ಅಧಿಕಾರಿಗಳ ಬಳಿಗೆ ಕರೆದೊಯ್ಯಿತು ಎಂದು ಕೋಪಾ ಏರ್‌ಲೈನ್ಸ್‌ ಹೇಳಿಕೆಯಲ್ಲಿ ತಿಳಿಸಿದೆ.  ಹಾಗೇ ಅಶಿಸ್ತಿನ ಆ ಪ್ರಯಾಣಿಕ ವಿಮಾನದ ಬಾಗಿಲು ತೆರೆಯುವುದನ್ನು ತಡೆಯಲು ಒಟ್ಟಾಗಿ ಸಹಕರಿಸಿದ ಸಹ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ಹೊಗಳಿ ಧನ್ಯವಾದ ತಿಳಿಸಿದ್ದಾರೆ.  

ಇದನ್ನೂ ಓದಿ: ಉತ್ತರಾಖಂಡ ಬಸ್ ದುರಂತ; ಹಿಂದೂ ಯಾತ್ರಾರ್ಥಿಗಳ ಸಾವನ್ನು ಅಣಕಿಸಿದ ರೆಹಮಾನ್ ಅರೆಸ್ಟ್

ಕೆಲವು ದಿನಗಳ ಹಿಂದೆ ಯುನೈಟೆಡ್ ಏರ್‌ಲೈನ್ಸ್‌ ವಿಮಾನದಲ್ಲಿ ಕ್ಯಾಬಿನ್‍ನಲ್ಲಿ ಮಲಗಿದ್ದ ಕಿವುಡ ಪ್ರಯಾಣಿಕನ ಮೇಲೆ ಯುನೈಟೆಡ್ ಸ್ಟೇಟ್‍ನ ವ್ಯಕ್ತಿಯೊಬ್ಬ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಶಂಕಿತನನ್ನು 44 ವರ್ಷದ ಎವೆರೆಟ್ ಚಾಲ್ ನೆಲ್ಸನ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಯುಎಸ್‍ನ ವಿಶೇಷ ವಿಮಾನ ನ್ಯಾಯವ್ಯಾಪ್ತಿಯಲ್ಲಿ ದೈಹಿಕ ಹಲ್ಲೆ  ನಡೆಸಿದ ಆರೋಪವನ್ನು ಅವನ ಮೇಲೆ ಹೊರಿಸಲಾಗಿದೆ ಮತ್ತು ಈ ಆರೋಪ ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.