Saturday, 10th May 2025

Year-Ender 2024: ಅಲ್ಲು ಅರ್ಜುನ್ ಬಂಧನ, ಪೂನಂ ಪಾಂಡೆ ಫೇಕ್ ನಿಧನ- 2024ರ ಟಾಪ್ 10 ಸಿನಿಮೀಯ ಪ್ರಕರಣಗಳಿವು

2024ರ ಕೊನೆಯ ದಿನದಲ್ಲಿ ನಾವಿದ್ದೇವೆ. ಈ ವರ್ಷ ನಡೆದುಹೋದ ಸಿಕಿ-ಕಹಿ ಘಟನೆಗಳನ್ನೊಮ್ಮೆ ನೆನಪಿಸಿಕೊಳ್ಳುವುದು ಈ ಸಂದರ್ಭದ ತುರ್ತು ಹೌದು ಮತ್ತು ಇದರೊಂದಿಗೆ ಹೊಸ ವರ್ಷಕ್ಕೆ ಅಡಿಯಿಡಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ, 2024ರಲ್ಲಿ ಬಾಲಿವುಡ್ (Bollywood) ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ (Indian Cinema) ನಡೆದಿರುವ ವಿವಾದಾತ್ಮಕ ಘಟನೆಗಳತ್ತ ಒಮ್ಮೆ ಕಿರುನೋಟವನ್ನು (Year-Ender 2024) ಹರಿಸುವ ಉದ್ದೇಶ ಈ ಲೇಖನದ್ದಾಗಿದೆ.

ನಟಿ ಪೂನಂ ಪಾಂಡೆ, ಕಂಗನಾ ರಣಾವತ್, ಅಲ್ಲು ಅರ್ಜುನ್ ಮೊದಲಾದ ಸ್ಟಾರ್ ಗಳು ಈ ವರ್ಷ ಬೇರೆ ಬೇರೆ ಕಾರಣಗಳಿಂದಾಗಿ ವಿವಾದದ ಕೇಂದ್ರ ಬಿಂದುವಾದರು. ಇವರಲ್ಲಿ ಕೆಲವರು ಜನರ ಗಮನವನ್ನು ತಮ್ಮತ್ತ ಸೆಳೆಯಲೆಂದೇ ವಿವಾದವನ್ನು ಸೃಷ್ಟಿಸಿಕೊಂಡರೆ, ಇನ್ನು ಕೆಲವರು ತಮಗರಿವಿಲ್ಲದಂತೆ ಟಾಕ್ ಆಫ್ ದಿ ಟೌನ್ ಆಗಿ ಮೂಡಿಬಂದರು. ಹಾಗಾದ್ರೆ, ಈ ವರ್ಷ ಸಿನಿ ರಂಗದಲ್ಲಿ ಉಂಟಾದ ಟಾಪ್-10 ವಿವಾದಗಳತ್ತ ಒಂದು ದೃಷ್ಟಿ ಹರಿಸುವುದಾದರೆ..

1. ಅಲ್ಲು ಅರ್ಜುನ್ ಮತ್ತು ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ:

ಈ ವರ್ಷದ ಮೆಗಾ ಬ್ಲಾಕ್ ಬ್ಲಸ್ಟರ್ ಸಿನೆಮಾ ಪುಷ್ಟ-2ರ ಪ್ರೀಮಿಯರ್ ಶೋ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ತೆಲಂಗಾಣದ ಸಂಧ್ಯಾ ಥಿಯೇಟರ್ ಗೆ ಸರ್ಪ್ರೈಸ್ ವಿಸಿಟ್ ನೀಡಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 35 ವರ್ಷದ ಮಹಿಳೆಯೊಬ್ಬರು ದುರಂತ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನಕ್ಕೊಳಗಾಗಬೇಕಾಯಿತು. ಈ ಕಾಲ್ತುಳಿತ ಘಟನೆಯಲ್ಲಿ ಮಹಿಳೆ ಮೃತಪಟ್ಟರೆ, ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದ. ಅಲ್ಲು ಅರ್ಜುನ್ ಸದ್ಯಕ್ಕೆ ಮದ್ಯಂತರ ಜಾಮೀನಿನಲ್ಲಿ ಹೊರಗಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ಪುಷ್ಟ-2 ಚಿತ್ರ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ 1700 ಕೊಟಿ ರೂಪಾಯಿಗಳನ್ನು ಗಳಿಸಿ ಮುನ್ನುಗ್ಗುತ್ತಿದೆ.

2. ಪೂನಂ ಪಾಂಡೆ ಸಾವಿನ ಪ್ರಹಸನ:

ಈ ವರ್ಷದ ಪ್ರಾರಂಭದ ಫೆಬ್ರವರಿ ತಿಂಗಳಿನಲ್ಲಿ ನಟಿ ಪೂನಂ ಪಾಂಡೆ ಸಾವಿನ ಕುರಿತಾಗಿ ಹಬ್ಬಿದ ಸುದ್ದಿಯೊಂದು ಬಾಲಿವುಡ್ ಮತ್ತು ನಟಿಯ ಅಭಿಮಾನಿ ವಲಯದಲ್ಲಿ ಬಿರುಗಾಳಿಯನ್ನೆಬ್ಬಿಸಿತ್ತು. ಪೂನಂ ಪಾಂಡೆ ಗರ್ಭಕೋಶದ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ನಟಿಯ ಆಪ್ತ ವಲಯಗಳೇ ಹರಿಬಿಟ್ಟಿದ್ದರು ಎಂಬುದಾಗಿ ಬಳಿಕ ತಿಳಿದುಬಂದಿತ್ತು ಮತ್ತು ಇದೊಂದು ಫೇಕ್ ಸುದ್ದಿ ಎಂದು ಆ ಬಳಿಕ ಗೊತ್ತಾಗಿತ್ತು. ಬಳಿಕ ಗೊತ್ತಾಗಿದ್ದೇನೆಂದರೆ, ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನಟಿಯೇ ಈ ರೀತಿಯಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಳು ಎಂದು ಆಕೆ ಹೇಳಿಕೊಂಡಿದ್ದಳು. ನೆಟ್ಟಿಗರು ಮತ್ತು ಕೆಲವು ಸ್ಟಾರ್ ಗಳು ನಟಿ ಪೂನಂ ಪಾಂಡೆಯ ಈ ಪಬ್ಲಿಸಿಟಿ ಸ್ಟಂಟನ್ನು ಟೀಕಿಸಿದ್ದರು. ಇದೆಲ್ಲಾ ಆದ ಬಳಿಕ ನಟಿಯ ಪಿ.ಆರ್. ಏಜೆನ್ಸಿ ಕ್ಷಮೆಯಾಚಿಸುವುದರೊಂದಿಗೆ ಈ ಪ್ರಕರಣಕ್ಕೆ ತೆರೆ ಬಿತ್ತು.

3. ಹೇಮ ಕಮಿಟಿ ವರದಿ:

ಈ ವರ್ಷದ ಆಗಸ್ಟ್ ತಿಂಗಳು ಮಳಯಾಲಂ ಚಿತ್ರರಂಗಕ್ಕೆ ಒಂದು ಕೆಟ್ಟ ತಿಂಗಳೆಂದೇ ಹೇಳಬಹುದು. ಮಾಲಿವುಡ್ ನಲ್ಲಿ ನಟಿಯರ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಜಸ್ಟಿಸ್ ಹೇಮಾ ಕಮಿಟಿಯ ವರದಿ ಅಲ್ಲಿ ಅಲ್ಲೋಲ ಕಲ್ಲೋಲವನ್ನೇ ಉಂಟುಮಾಡಿತ್ತು. ಈ ವರದಿ ಹೊರಬಿದ್ದ ಬಳಿಕ ಅಸೋಸಿಯೇಷನ್ ಆಫ್ ಮಳಯಾಲಂ ಮೂವಿ ಆರ್ಟಿಸ್ಟ್ ಅಥವಾ ಅಮ್ಮಾದ ಕಾರ್ಯಕಾರಿ ಸಮಿತಿಯ ಎಲ್ಲಾ 17 ಸದಸ್ಯರೂ ರಾಜೀನಾಮೆ ನೀಡುವ ಮೂಲಕ ಸುದ್ದಿಯಾದರು. ಇವರಲ್ಲಿ ಹಿರಿಯ ನಟ ಮತ್ತು ಅಮ್ಮಾದ ಅಧ್ಯಕ್ಷ ಮೋಹನ್ ಲಾಲ್ ಸಹ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ವರದಿಯ ಆಧಾರದಲ್ಲಿ ಮಾಲಿವುಡ್ ನ ಹಲವಾರು ಹೈ-ಪ್ರೊಫೈಲ್ ವ್ಯಕ್ತಿಗಳ ಮೇಲೆ ಎಫ್.ಐ.ಆರ್. ದಾಖಲಾಯಿತು. ಇವರಲ್ಲಿ ನಟ ಸಿದ್ದಿಕಿ, ಜಯಸೂರ್ಯ, ಕೇರಳ ಸ್ಟೇಟ್ ಚಲಚ್ಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಸಿಪಿಐಂ (ಎಂ)ನ ಮಾಜಿ ಶಾಸಕ ಹಾಗೂ ನಟ ಮುಖೇಶ್ ಪ್ರಮುಖರಾಗಿದ್ದರು.

4.ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ‘ಲಾಪತಾ ಲೇಡೀಸ್’:

ಈ ಬಾರಿಯ ಅಕಾಡೆಮಿ ಪ್ರಶಸ್ತಿಗೆ ಲಾಪತಾ ಲೇಡೀಸ್ ಚಿತ್ರವನ್ನು ಭಾರತದಿಂದ ನಾಮನಿರ್ದೇಶನ ಮಾಡಿದ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ನಿರ್ಧಾರವನ್ನು ಸೋಷಿಯಲ್ ಮೀಡಿಯಾದ ಒಂದು ವರ್ಗ ಟೀಕಿಸಿತ್ತು. ಅವರ ಪ್ರಕಾರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಚಿತ್ರ ನಾಮನಿರ್ದೇಶನಗೊಳ್ಳಬೇಕಿತ್ತಂತೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ವಿಚಾರ ಕೆಲ ದಿನಗಳ ಕಾಲ ಸುದ್ದಿಯಲ್ಲಿತ್ತು. ಎರಡೂ ಚಿತ್ರಗಳೂ ವಿಮರ್ಶಕರಿಂದ ಉತ್ತಮ ವಿಮರ್ಶನೆಯನ್ನು ಪಡೆದುಕೊಂಡಿದ್ದರೂ, ‘ಆಲ್ ವಿ ಇಮ್ಯಾಜಿನ್..’ ಚಿತ್ರ ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಗ್ರ್ಯಾಂಡ್ ಪಿಕ್ಸ್ ಗೆದ್ದ ಮೊದಲ ಭಾರತೀಯ ಚಿತ್ರವಾಗಿ ಮೂಡಿಬಂದಿತ್ತು. ಹಾಗಾಗಿ ಇದಕ್ಕೆ ಆಸ್ಕರ್ ಪ್ರಶಸ್ತಿ ಲಭಿಸುವ ಸಾಧ್ಯತೆಗಳು ಜಾಸ್ತಿ ಇತ್ತು ಎನ್ನುವುದು ಕೆಲವರ ವಾದವಾಗಿತ್ತು.

5. ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆ ವಿವಾದ:

ಸಿಬಿಎಫ್.ಸಿ. ಪ್ರಮಾಣಪತ್ರ ಲಭಿಸದ ಕಾರಣ ನಟಿ ಕಂಗನಾ ರಾಣಾತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಗೊಳ್ಳುವುದು ಹಲವಾರು ಬಾರಿ ಮುಂದೂಡಲ್ಪಟ್ಟಿದ್ದು ವಿವಾದದ ಸ್ವರೂಪವನ್ನು ಪಡೆದುಕೊಂಡಿತು. ಹಲವಾರು ಸಿಖ್ ಸಂಘಟನೆಗಳು ಈ ಚಿತ್ರದಲ್ಲಿ ತಮ್ಮ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಮತ್ತು ತಪ್ಪು ವಿಚಾರಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಆರೊಪಿಸಿದ್ದವು. ಅಂತೂ ಈ ಚಿತ್ರದ ಬಿಡುಗಡೆಗೆ ಇದೀಗ ಡೇಟ್ ಪಿಕ್ಸ್ ಆಗಿದ್ದು, ಜನವರಿ 17ರಂದು ‘ಎಮರ್ಜೆನ್ಸಿ’ ಬಿಡುಗಡೆಗೊಳ್ಳಲಿದೆ.

ಈ ಸುದ್ದಿಯನ್ನೂ ಓದಿ: Kerala Nurse: ಕೇರಳದ ನರ್ಸ್‌ಗೆ ಯೆಮೆನ್‌ನಲ್ಲಿ ಮರಣದಂಡನೆ… ನೆರವಿಗೆ ಮುಂದಾದ ಭಾರತ! ಏನಿದು ಪ್ರಕರಣ?

6. ದಿಲ್ಜಿತ್ ದೋಸ್ಸಾಂಜೆ ಸಂಗೀತ ಕಾರ್ಯಕ್ರಮದ ಟಿಕೆಟ್‌ಗಳ ಬ್ಲ್ಯಾಕ್ ಮಾರ್ಕೆಟಿಂಗ್ ಆರೋಪ:

ಬ್ರಿಟಿಷ್ ರಾಕ್ ಬ್ಯಾಂಡ್ ಮತ್ತು ಪಂಜಾಬಿ ಸ್ಟಾರ್ ಸಿಂಗರ್ ದಿಲ್ಜಿತ್ ದೊಸ್ಸಾಂಜೆ ಸಂಗೀತ ಕಾರ್ಯಕ್ರಮದ ಟಿಕೆಟ್ ಗಳ ಬ್ಲ್ಯಾಕ್ ಮಾರ್ಕೆಟಿಂಗ್ ಬಗ್ಗೆ ಆರೋಪ ಕೇಳಿಬಂದಿದ್ದು, ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟ್ ಕಳೆದ ಅಕ್ಟೋಬರ್ ನಲ್ಲಿ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಅಸಹಜತೆ ಕಂಡುಬರುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿತ್ತು. ಇನ್ನು, ವಿವಿಧ ರಾಜ್ಯ ಸರಕಾರಗಳು, ಆಲ್ಕೋಹಾಲ್, ಡ್ರಗ್ಸ್ ಮತ್ತು ಹಿಂಸೆಗೆ ಸಂಬಂಧಿಸಿದ ಹಾಡುಗಳನ್ನು ಹಾಡದಂತೆ ತನಗೆ ತಾಕೀತು ಮಾಡುತ್ತಿವೆ ಎಂಬ ವಿಚಾರದಲ್ಲಿ ದೊಸ್ಸಾಂಜ್ ಹೆಡ್ ಲೈನ್ ಸುದ್ದಿಯಾಗಿದ್ದರು.

7. ‘ಐಸಿ 814: ದಿ ಕಂದಹಾರ್ ಹೈಜಾಕ್’ ವಿವಾದ:

1999ರ ಕಂದಹಾರ್ ವಿಮಾನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಉಗ್ರರ ನೈಜ ಧಾರ್ಮಿಕ ಗುರುತನ್ನು ಅನುಭವ್ ಸಿನ್ಹಾ ಶೋದಲ್ಲಿ ಮರೆಮಾಚಲಾಗಿದೆ ಎಂದು ಸೋಷಿಯಲ್ ಮಿಡಿಯಾದ ಒಂದು ಗುಂಪು ವಿವಾದವನ್ನು ಹುಟ್ಟುಹಾಕಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಈ ವಿವಾದ ಭುಗಿಲೆದ್ದಿತ್ತು.

8. ನಯನತಾರ – ಧನುಷ್ ಕಲಹ:

ಕಳೆದ ತಿಂಗಳು ಒಂದು ಪತ್ರದ ಮೂಲಕ ನಟಿ ನಯನತಾರ ಅವರು ನಟ ಧನುಷ್ ವಿರುದ್ಧ ಮಾಡಿದ್ದ ಗಂಭೀರವಾದ ಆರೋಪವೊಂದು ಕಾಲಿವುಡ್ ನಲ್ಲಿ ಸಂಚಲನ ಮೂಡಿಸಿತ್ತು. 2015ರಲ್ಲಿ ‘ನಾನುಮ್ ರೌಡಿ ಧಾನ್’ ಎಂಬ ಚಿತ್ರವನ್ನು ಧನುಷ್ ನಿರ್ಮಾಣ ಮಾಡಿದ್ದರು. ಇದರ ಕೆಲವೊಂದು ಸನ್ನಿವೇಶಗಳನ್ನು ನೆಟ್ ಫ್ಲಿಕ್ಸಿನ ‘ನಯನತಾರ : ಬಿಯಾಂಡ್ ದಿ ಫೇರಿ ಟೇಲ್’ ಎಂಬ ಡಾಕ್ಯುಮೆಂಟರಿಯಲ್ಲಿ ಬಳಸಿಕೊಳ್ಳುವುದಕ್ಕೆ ಧನುಷ್ ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಚಿತ್ರದ ಟ್ರೈಲರ್ ಆನ್ ಲೈನ್ ನಲ್ಲಿ ರಿಲೀಸ್ ಆದ ಬಳಿಕ ಧನುಷ್ ಅವರು ತನಗೆ ಲೀಗಲ್ ನೋಟೀಸು ಕಳಿಸಿ 10 ಕೋಟಿ ಪರಿಹಾರಕ್ಕೆ ಆಗ್ರಹಿಸಿದ್ದರು ಎಂದು ನಯನತಾರ ಆರೋಪಿಸಿದ್ದರು. ಈ ಪ್ರಕರಣದಲ್ಲಿ ನಟಿ ನಯನತಾರ ಪರವಾಗಿ ಶ್ರುತಿ ಹಾಸನ್, ಪಾರ್ವತಿ, ಐಶ್ವರ್ಯ ರಾಜೇಶ್ ಮತ್ತು ನಝ್ರಿಯಾ ನಾಝಿಮ್ ಬೆಂಬಲವಾಗಿ ನಿಂತಿದ್ದರು.

9. ನಿರ್ದೇಶಕ ಆಟ್ಲಿ ವಿರುದ್ಧ ಕಪಿಲ್ ಶರ್ಮ ವಿವಾದಾತ್ಮಕ ಹೇಳಿಕೆ:

ಈ ತಿಂಗಳ ಪ್ರಾರಂಭದಲ್ಲಿ, ಕಮೇಡಿಯನ್ ಕಪಿಲ್ ಶರ್ಮ ನಿರ್ದೇಶಕ ಆಟ್ಲಿ ಅವರ ಬಗ್ಗೆ ಆಡಿದ ಮಾತೊಂದು ವಿವಾದಕ್ಕೆ ಕಾರಣವಾಗಿತ್ತು. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ದಲ್ಲಿ ಜವಾನ್ ಚಿತ್ರದ ನಿರ್ದೇಶಕ ಆಟ್ಲಿ ಅವರ ಚರ್ಮದ ಬಣ್ಣದ ಬಗ್ಗೆ ತಮಾಷೆಯಾಗಿ ಆಡಿದ್ದ ಮಾತುಗಳು ವಿವಾದವನ್ನೆಬ್ಬಿಸಿತ್ತು. ಈ ಪ್ರಕರಣ ವಿವಾದದ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆ ಕಪಿಲ್ ಶರ್ಮಾ ತನ್ನ ಕಮೆಂಟನ್ನು ಸಮರ್ಥಿಸಿಕೊಂಡಿದ್ದರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಹರಡದಂತೆ ಅವರು ವಿನಂತಿಸಿಕೊಂಡಿದ್ದರು.

10. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ದರ್ಶನ್ ಬಂಧನ:

ಈ ವರ್ಷದ ಸ್ಯಾಂಡಲ್ ವುಡ್ ಗೆ ಆಘಾತಕಾರಿ ಸುದ್ದಿಯಾಗಿ ಎರಗಿದ್ದು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಜೂನ್ ನಲ್ಲಿ ಬಂಧನ‍ಕ್ಕೊಳಗಾಗಿದ್ದರು. ದರ್ಶನ್ ಜೊತೆ ನಟಿ ಪವಿತ್ರಾ ಗೌಡ ಹಾಗೂ ಇತರೇ ಏಳು ಜನ ಬಂಧನಕ್ಕೊಳಗಾಗಿದ್ದರು. ಈ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಸೇರಿದಂತೆ ಇತರರಿಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗಷ್ಟೇ ಜಾಮೀನು ನೀಡಿದೆ.

ಈ ಸುದ್ದಿಯನ್ನೂ ಓದಿ: Major Changes: 2025ರಲ್ಲಿ ದುನಿಯಾ ಚೇಂಜ್!‌ ಏನೆಲ್ಲ ಹೊಸ ಬದಲಾವಣೆ?