Wednesday, 14th May 2025

ಬ್ರಿಜ್ ಭೂಷಣ್ ಶರಣ್‍ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ತೀವ್ರ

ವದೆಹಲಿ: ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‍ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ.

ದೇಶದ ಅಗ್ರ ಕುಸ್ತಿಪಟುಗಳ ದೆಹಲಿಯ ಜಂತರ್‍ಮಂತರ್‍ನಲ್ಲಿ ಮತ್ತೆ ಪ್ರತಿಭಟನೆ ಆರಂಭಿಸಿದ್ದು, ಆರೋಪಿ ಬ್ರಿಜ್ ಭೂಷಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿ ದ್ದಾರೆ.

ತಮ್ಮ ಪ್ರತಿಭಟನೆಯನ್ನು ಬೆಂಬಲಿಸಲು ಬಯಸುವವರು ಬಂದು ಸೇರಬಹುದು. ಜನವರಿಯಲ್ಲಿ, ಪ್ರತಿಭಟನಾಕಾರರು ಎಡ ಪಕ್ಷದ ನಾಯಕಿ ಬೃಂದಾ ಕಾರಟ್ ಅವರನ್ನು ಕ್ರೀಡಾಪಟುಗಳ ಪ್ರತಿಭಟನೆ ಎಂದು ವೇದಿಕೆಯಿಂದ ಹೊರ ಹೋಗುವಂತೆ ತಿಳಿಸಿದ್ದರು.

ಈ ಬಾರಿ, ಬಿಜೆಪಿ, ಕಾಂಗ್ರೆಸ್, ಎಎಪಿ, ಅಥವಾ ಯಾವುದೇ ಪಕ್ಷವಾಗಲಿ ನಮ್ಮ ಪ್ರತಿಭಟನೆಗೆ ಸೇರಲು ಎಲ್ಲಾ ಪಕ್ಷಗಳಿಗೆ ಸ್ವಾಗತ ವಿದೆ. ನಾವು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ತಿಳಿಸಿದ್ದಾರೆ.

ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಳು ಮಹಿಳಾ ಕುಸ್ತಿಪಟುಗಳು ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ, ಪೊಲೀಸರು ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾನಿರತ ಅಥ್ಲೀಟ್‍ಗಳು ಹೇಳಿದ್ದಾರೆ.

ನಾವು ಹಗಲು ರಾತ್ರಿ ಇಲ್ಲಿ ಕುಳಿತುಕೊಳ್ಳುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ನಾವು ಇಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಫುಟ್‍ಪಾತ್‍ನಲ್ಲಿ ರಾತ್ರಿ ಕಳೆದ ಫೋಗಟ್ ಪ್ರತಿಜ್ಞೆ ಮಾಡಿದ್ದಾರೆ.