ಹೇಮಂತ ಋತುವಿನ (Winter Care) ಬಗ್ಗೆ ಬಹಳಷ್ಟು ಬಗೆಯ ವರ್ಣನೆಗಳಿವೆ. ಅವೆಲ್ಲವೂ ಹೆಚ್ಚಾಗಿ ಹೇಳುವುದು ಈ ಋತುವಿನಲ್ಲಿ ಪ್ರಕೃತಿಯೆಲ್ಲ ಹೇಗೆ ಒಣಗಿ ನಿಂತಿರುತ್ತದೆಂಬುದನ್ನೆ. ನಮ್ಮನ್ನೂ (winter health care) ಪ್ರಕೃತಿಯ ಒಂದು ಭಾಗ ಎಂದು ಪರಿಗಣಿಸಿದರೆ ನಾವೂ ಒಣಗಿದಂತಾಗುತ್ತೇವೆ. ಅಂದರೆ ಚರ್ಮ, ಕೂದಲು, ತುಟಿಗಳೆಲ್ಲ ಬಿರಿದು ನಿಂತಿರುತ್ತವೆ. ಹಾಗೆ ನೋಡಿದರೆ ಚಳಿಗಾಲವೆಂದರೆ ಮೊಗದ ನಗೆ ಮಾಸಿದಂತೆ! ತುಟಿಗಳೆಲ್ಲ ಬಿರಿದು, ರಕ್ತ ಸೋರಿ ಉರಿಯುತ್ತಿದ್ದರೆ ನಗುವುದಾದರೂ ಹೇಗೆ? ಹೀಗೆ ಒಡೆದ ಚೂರಾದ ನಗುವನ್ನು ಪುನಃ ಅರಳಿಸುವುದು ಹೇಗೆ?
ಕಾರಣಗಳೇನು?
ಚಳಿಗಾಲದ ಹವಾಮಾನದಲ್ಲಿನ ಶುಷ್ಕತೆ ಇದಕ್ಕೆ ಮುಖ್ಯ ಕಾರಣ. ಜೊತೆಗೆ ಚಳಿಯೆಂಬ ಕಾರಣಕ್ಕೆ ಸರಿಯಾಗಿ ನೀರು ಕುಡಿಯದಿರುವುದು ಇನ್ನೊಂದು ಪ್ರಮುಖ ಕಾರಣ.
ಇದಲ್ಲದೆ, ಪದೇಪದೇ ತುಟಿಗಳನ್ನು ನೆಕ್ಕುತ್ತಿರುವುದು, ಅಲರ್ಜಿಗಳು, ವಿಟಮಿನ್ ಬಿ ಅಥವಾ ಕಬ್ಬಿಣದ ಕೊರತೆ, ಬ್ಯಾಕ್ಟೀರಿಯ ಸೋಂಕು, ಥೈರಾಯ್ಡ್ ಸಮಸ್ಯೆ ಅಥವಾ ಬಳಸುತ್ತಿರುವ ಔಷಧ ಇಲ್ಲವೇ ಸ್ಕಿನ್‌ಕೇರ್ ವಸ್ತುಗಳಿಂದಾದ ಅಲರ್ಜಿ ಕಾರಣವಿರಬಹುದು.
ಕಾರಣಗಳೇನೇ ಇದ್ದರೂ ಬಿರಿದ ತುಟಿಗಳು ನಗು ಅಳಿಸಿ ನೋವು ತರುವುದಂತೂ ನಿಜ. ಚರ್ಮ ಸುಲಿದಂತಾಗುವುದು, ಊದಿಕೊಂಡು ಕೆಂಪಾದ ತುಟಿಗಳು, ಸೀಳಿದಂತಾಗಿ ರಕ್ತ ಒಸರುವುದು ಮುಂತಾದವು ಈ ಸಮಸ್ಯೆಯ ಪರಿಣಾಮಗಳು. ಹಾಗಾದರೆ ಚಳಿಗಾಲದಲ್ಲಿ ತುಟಿ ಒಡೆಯದಂತೆ ಏನು ಮಾಡಬಹುದು?
ನೀರು ಬೇಕು
ದೇಹಕ್ಕೆ ಹೆಚ್ಚಿನ ನೀರು ಬೇಕು ಎಂಬ ಸೂಚನೆಯೂ ಹೌದು. ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ. ಹೆಚ್ಚಿನ ದ್ರವಾಹಾರಗಳನ್ನು ಸೇವಿಸಿ, ದೇಹ ನಿರ್ಜಲೀಕರಣದತ್ತ ಸಾಗದಂತೆ ಎಚ್ಚರ ವಹಿಸಿ. ಬಿರಿದ ತುಟಿಗಳನ್ನು ಆಗಾಗ ನೆಕ್ಕುತ್ತಿರಬೇಡಿ. ಇದರಿಂದ ಸಮಸ್ಯೆ ಬಿಗಡಾಯಿಸುತ್ತದೆ. ಚರ್ಮ ಸುರಿಯುತ್ತಿದ್ದರೆ ಅದನ್ನು ಎಳೆಯುವುದು, ಹಲ್ಲಿನಿಂದ ಕಚ್ಚುವುದು ಮಾಡಬೇಡಿ. ಬದಲಿಗೆ ತುಟಿಗೆ ಸರಿಯಾದ ಮ್ಯಾಯಿಶ್ಚರೈಸರ್ ಹಚ್ಚಿ.
ಅಲರ್ಜಿಗಳಿದ್ದರೆ?
ಅಲರ್ಜಿಗಳಿಂದಾಗಿ ಮೂಗು ಕಟ್ಟಿ ಬಾಯಲ್ಲಿ ಉಸಿರಾಡುತ್ತಿದ್ದರೆ, ಅದರಿಂದಲೂ ಬಾಯಿ ಒಣಗುತ್ತದೆ. ಅಲರ್ಜಿಗಳನ್ನು ನಿಯಂತ್ರಿಸಲು ಮದ್ದು ಮಾಡಿ.
ದೀರ್ಘ ಕಾಲ ಸೂರ್ಯನ ಬಿಸಿಲಿಗೆ ಒಡ್ಡಿಕೊಂಡರೂ ತುಟಿ ಒಣಗಿ, ಕಪ್ಪಾಗಿ, ಬಿರಿಯುತ್ತದೆ. ಅಂಥ ಸಂದರ್ಭಗಳಲ್ಲಿ ಸನ್‌ಸ್ಕ್ರೀನ್ ಇರುವ ಮಾಯಿಶ್ಚರೈಸರ್ ಲೇಪಿಸಿ. ಧೂಮಪಾನದಿಂದಲೂ ತುಟಿಗಳ ಸ್ಥಿತಿ ದಯನೀಯವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಒಂದಿಷ್ಟು ಮನೆಮದ್ದುಗಳನ್ನು ನೀವೇ ಮಾಡಿಕೊಳ್ಳಬಹುದು.
ಮೊದಲಿಗೆ ಒಣಗಿ ಸುಲಿದ ಚರ್ಮವನ್ನು ತೆಗೆದು ಹಾಕುವುದು ಅಗತ್ಯ. ಅದಿಲ್ಲದಿದ್ದರೆ ಸುಲಭಕ್ಕೆ ಬಿರಿದ ತುಟಿಗಳನ್ನು ಸರಿಪಡಿಸಲಾಗದು. ಹೀಗೆ ಎಕ್ಸ್‌ಫಾಲಿಯೇಟ್ ಮಾಡುವುದಕ್ಕೆ ದುಬಾರಿ ಬೆಲೆಯ ಸ್ಕ್ರಬ್‌ಗಳೇ ಬೇಕೆಂದಿಲ್ಲ. ಅದನ್ನೂ ಮನೆಯಲ್ಲೇ ಮಾಡಿಕೊಳ್ಳಬಹುದು.
ಸಕ್ಕರೆ ಅಥವಾ ಸೈಂಧವ ಲವಣಕ್ಕೆ ಕೊಂಚ ಕೊಬ್ಬರಿ ಎಣ್ಣೆ ಅಥವಾ ಜೇನುತುಪ್ಪ ಮಿಶ್ರ ಮಾಡಿ. ಒದ್ದೆ ಬಟ್ಟೆಯ ನೆರವಿನಿಂದ ಈ ಮಿಶ್ರಣವನ್ನು ತುಟಿಗೆ ಹಾಕಿ ಮೃದುವಾಗಿ ತಿಕ್ಕಿ. ಇದರಿಂದ ಮೇಲ್ಪದರದಲ್ಲಿರುವ ಸತ್ತ ಚರ್ಮವೆಲ್ಲಾ ಎದ್ದು ಬರುತ್ತದೆ. ಹೊಸ ಚರ್ಮ ಬೆಳೆಯಲು ಅವಕಾಶವಾಗುತ್ತದೆ.

ಮನೆಮದ್ದುಗಳು
ಶುದ್ಧ ಕೊಬ್ಬರಿ ಎಣ್ಣೆಯು ಚರ್ಮ ಒಣಗದಂತೆ ರಕ್ಷಣಾ ಕವಚವನ್ನು ಮೇಲ್ಪದರದಲ್ಲಿ ನಿರ್ಮಿಸುತ್ತದೆ. ಜೊತೆಗೆ, ಚರ್ಮದ ಉರಿ ಮತ್ತು ಊತವನ್ನು ಕಡಿಮೆ ಮಾಡುತ್ತದೆ.
ಬಿರಿದ ತುಟಿಗಳಿಗೆ ಲೋಳೆಸರವೂ ಮದ್ದಾಗಬಲ್ಲದು. ಇದರ ಎಲೆಗಳ ಒಳಗಿನ ಲೋಳೆಯನ್ನೇ ನೇರವಾಗಿ ತುಟಿಗೆ ಲೇಪಿಸಬಹುದು. ಅದಿಲ್ಲದಿದ್ದರೆ ಮಾರುಕಟ್ಟೆಯಲ್ಲಿರುವ ಶುದ್ಧ ಅಲೋವೇರಾ ಜೆಲ್ ಸಹ ಲೇಪಿಸಬಹುದು.
Mosquitoes: ಸೊಳ್ಳೆಗಳು ಕಿವಿಯ ಬಳಿಯೇ ಬಂದು ಗುಂಯ್‌ಗುಡಲು ಕಾರಣವೇನು ಗೊತ್ತಾ?
ಚರ್ಮದ ಸಮಸ್ಯೆಗಳ ಪರಿಹಾರಕ್ಕೆ ಜೇನುತುಪ್ಪ ಸೂಕ್ತ ಔಷಧ. ಇದರ ಉತ್ಕರ್ಷಣ ನಿರೋಧಕಗಳು ಗಾಯಗಳನ್ನು ಮಾಯಿಸುವಲ್ಲಿ ಒಳ್ಳೆಯ ಕೆಲಸ ಮಾಡಬಲ್ಲವು. ಒಡೆದು ರಕ್ತ ಸೋರುತ್ತಿರುವ ತುಟಿಗಳಿಗೆ ಕೊಂಚ ಕೊಬ್ಬರಿ ಎಣ್ಣೆಯೊಂದಿಗೆ ಜೇನುತುಪ್ಪವನ್ನು ಲೇಪಿಸಬಹುದು. ಇದರಿಂದ ಚಿಕ್ಕಪುಟ್ಟ ಸೋಂಕುಗಳೂ ಕಡಿಮೆಯಾಗುತ್ತವೆ.
ಣ್ಣೆ ಹಣ್ಣು ಪ್ರಬಲ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದರಿಂದ ತೆಗೆಯಲಾದ ಜಿಡ್ಡು ಸಹ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಉಳಿದ ತೈಲಗಳಂತೆಯೇ ಇದು ತುಟಿಗಳಿಗೆ ಪೋಷಣೆ ಒದಗಿಸುತ್ತದೆ. ಇದರ ಲೆನೊಲೆನಿಕ್ ಆಮ್ಲ ಮತ್ತು ಇತರ ಕೊಬ್ಬಿನಾಮ್ಲಗಳು ಒಡೆದ ತುಟಿಗಳನ್ನು ಮೃದುವಾಗಿಸಬಲ್ಲವು.