Wednesday, 14th May 2025

Shashi Tharoor: ಕಾಂಗ್ರೆಸ್ ಸಂಸದ ಶಶಿ ತರೂರ್ ತೊಡೆಯೇರಿದ ಕೋತಿ ಮಾಡಿದ್ದೇನು?

Shashi Tharoor

ಹೊಸದಿಲ್ಲಿ: ಸಾಮಾನ್ಯವಾಗಿ ಕೋತಿಗಳು ಮನುಷ್ಯರನ್ನು ನೋಡಿ ಹೆದರಿಕೊಳ್ಳುತ್ತವೆ. ಅವು ಮನುಷ್ಯರ ಜತೆ ಹೆಚ್ಚು ಒಡನಾಟ ಮಾಡುವುದಿಲ್ಲ. ಆದರೆ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಅವರು ಕೋತಿಯೊಂದಿಗಿನ ತಮ್ಮ ಒಡನಾಟವನ್ನು ಬಿಂಬಿಸುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದನ್ನು ʼಅಸಾಧಾರಣ ಅನುಭವʼ ಎಂದು ಕರೆದಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಮ್ಮ ತೋಟದಲ್ಲಿ ನಡೆದ ದೃಶ್ಯದ ಫೋಟೊಗಳನ್ನು ಪೋಸ್ಟ್ ಮಾಡಿದ ಸಂಸದ ಶಶಿ ತರೂರ್ ಅವರು,  ಕೋತಿ ತನ್ನ ತೊಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಮತ್ತು ಅದಕ್ಕೆ ನೀಡಿದ  ಬಾಳೆಹಣ್ಣನ್ನು ಖುಷಿಯಿಂದ ಎಂಜಾಯ್‌ ಮಾಡುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕೋತಿ ತರೂರ್ ಅವರನ್ನು ಪ್ರೀತಿಯಿಂದ  ಅಪ್ಪಿಕೊಂಡಿದೆ. ಈ ಫೋಟೊಗಳು ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ.

ಸಂಸದ ಶಶಿ ತರೂರ್ ಅವರು ತಮ್ಮ ತೋಟಕ್ಕೆ ಬಂದ  ಕೋತಿಯೊಂದಿಗಿನ ಮೌನ ಮತ್ತು ವಿಶೇಷ ಸಂವಾದದ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. ಅವರು ತಮ್ಮ ತೋಟದಲ್ಲಿ ಕುಳಿತು ಪತ್ರಿಕೆಯನ್ನು ಓದುತ್ತಿದ್ದಾಗ ಕೋತಿಯೊಂದು ಅವರ ಬಳಿಗೆ ಬಂದು ಅವರ ತೊಡೆಯ ಮೇಲೆ ಆರಾಮವಾಗಿ ಕುಳಿತಿದೆ ಎಂದು ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ತೋಟದಲ್ಲಿ ಕುಳಿತು, ಪತ್ರಿಕೆಗಳನ್ನು ಓದುತ್ತಿದ್ದಾಗ, ಒಂದು ಕೋತಿ ಒಳಗೆ ಬಂದು ಅಡ್ಡಾಡುತ್ತಿತ್ತು. ನಂತರ ಅದು ನೇರವಾಗಿ ನನ್ನ ಬಳಿಗೆ ಬಂದು ನನ್ನ ತೊಡೆಯ ಮೇಲೆ ಕುಳಿತಿದೆ.  ನಾನು ಅದಕ್ಕೆ ನೀಡಿದ  ಒಂದೆರಡು ಬಾಳೆಹಣ್ಣುಗಳನ್ನು ಅದು ತಿಂದು ಖಾಲಿ ಮಾಡಿ ನಂತರ  ನನ್ನನ್ನು ತಬ್ಬಿಕೊಂಡು ನನ್ನ ಎದೆಯ ಮೇಲೆ ತಲೆಯಿಟ್ಟು ಮಲಗಿದೆ. ನಾನು ನಿಧಾನವಾಗಿ ಎದ್ದೇಳಲು ಶುರುಮಾಡಿದಾಗ ಅದು ಅಲ್ಲಿಂದ ಜಿಗಿದು ಓಡಿಹೋಗಿದೆ” ಎಂದು ತರೂರ್ ಹೇಳಿದ್ದಾರೆ.

ಇದನ್ನೂ ಓದಿ:ಯೂಟ್ಯೂಬ್‍ನಲ್ಲಿ ಸಖತ್ ವೈರಲ್‌ ಆಯ್ತು ನಿರಾಹುವಾ & ಮಧು ಶರ್ಮಾ ‘ಪ್ಯಾಸ್ ತನ್ ಕಿ ಬುಜಾಜಾ’ ಹಾಡು

ಈ ಮುದ್ದಾದ ಫೋಟೊಗಳು ವೈರಲ್ ಆಗಿದ್ದು, ಅನೇಕ  ನೆಟ್ಟಿಗರ ಗಮನ ಸೆಳೆದಿದೆ. ಇತ್ತೀಚೆಗಷ್ಟೇ ಎಕ್ಸ್‌ನಲ್ಲಿ ಅಪ್‍ಲೋಡ್ ಮಾಡಲಾದ ಈ ಪೋಸ್ಟ್ ಈಗಾಗಲೇ 25,000 ಕ್ಕೂ ಹೆಚ್ಚು ವೀಕ್ಷಣೆಗಳು ಬಂದಿವೆ. ಅನೇಕರು ಶಶಿ ತರೂರ್ ಅವರಿಗೆ ಪ್ರಾಣಿ ಬಗ್ಗೆ ಇರುವ ಒಲವು ಕಂಡು ಮೆಚ್ಚಿ ಅನೇಕರು ಲೈಕ್ ನೀಡಿದ್ದಾರೆ.