Monday, 12th May 2025

ವಿಧಾನಸಭೆಗೆ ಅಕ್ರಮವಾಗಿ ಪ್ರವೇಶಿಸಿದ್ದ ವ್ಯಕ್ತಿಯ ಬಂಧನ

ಕೋಲ್ಕತ್ತ: ಶಾಸಕನೆಂದು ಹೇಳಿಕೊಂಡು ಪಶ್ಚಿಮ ಬಂಗಾಳದ ವಿಧಾನಸಭೆಗೆ ಅಕ್ರಮವಾಗಿ ಪ್ರವೇಶಿಸಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ಧಾರೆ. ಬಂಧಿತನನ್ನು ಹೌರಾ ಜಿಲ್ಲೆಯ ಗಜಾನನ ವರ್ಮಾ ಎಂದು ಗುರುತಿಸಲಾಗಿದೆ.

ಗೇಟ್‌ನಲ್ಲಿ ತಾನೊಬ್ಬ ಶಾಸಕ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಒಳಗೆ ಪ್ರವೇಶಿಸಿದ್ದ. ಬಜೆಟ್ ಮಂಡನೆ ವೇಳೆಯೇ ಈ ಘಟನೆ ನಡೆದಿದೆ.

‘ಬಜೆಟ್ ಅಧಿವೇಶನ ನಡೆಯುತ್ತಿರುವ ವಿಧಾನಸಭೆಗೆ ಹೇಗೆ ಪ್ರವೇಶಿಸುವುದು ಎಂದು ಕೇಳುತ್ತಾ ಲಾಬಿಯಲ್ಲಿ ಓಡಾಡುತ್ತಿದ್ದ ಆತನನ್ನು ಭದ್ರತಾ ಸಿಬ್ಬಂದಿ ವಿಚಾರಿಸಿದಾಗ, ತಾನೊಬ್ಬ ಶಾಸಕನೆಂದು ಹೇಳಿದ್ದಾನೆ. ಆದರೆ, ಆತನ ಬಳಿ ಯಾವುದೇ ಗುರುತಿನ ಚೀಟಿ ಇರಲಿಲ್ಲ. ಹಾಗಾಗಿ, ಮಾರ್ಷಲ್‌ಗಳನ್ನು ಕರೆಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದೆವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಪಾಲ ಸಿ.ವಿ. ಆನಂದ ಬೋಸ್ ನನ್ನನ್ನು ಕಳುಹಿಸಿದ್ದಾರೆ ಎಂದು ವ್ಯಕ್ತಿ ಹೇಳಿದ್ದ ಎಂದು ತಿಳಿದುಬಂದಿದೆ.

‘ಕೆಲ ವರ್ಷಗಳ ಹಿಂದೆ ಹೆಂಡತಿ ಮತ್ತು ಮಗನನ್ನು ಕಳೆದುಕೊಂಡ ಬಳಿಕ ಆತ ಮಾನಸಿಕವಾಗಿ ವಿಚಲಿತ ನಾದಂತೆ ಕಾಣುತ್ತಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.