Wednesday, 14th May 2025

ಅಭಿಷೇಕ್ ಬ್ಯಾನರ್ಜಿ ಪತ್ನಿಗೆ ಜಾಮೀನು ಸಹಿತ ವಾರೆಂಟ್

ನವದೆಹಲಿ: ಕಲ್ಲಿದ್ದಲು ಹಗರಣ ಆರೋಪದಲ್ಲಿ ಹಣ ವರ್ಗಾವಣೆ ಕೇಸ್ ಗೆ ಸಂಬಂಧಿಸಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ದೂರಿನಂತೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿಗೆ ದೆಹಲಿಯ ನ್ಯಾಯಾಲಯ ಶನಿವಾರ ಜಾಮೀನು ಸಹಿತ ವಾರೆಂಟ್ ಹೊರಡಿಸಿದೆ.

ಹಲವು ಬಾರಿ ನೋಟಿಸ್ ಕಳುಹಿಸಿದ್ದರೂ ತನಿಖಾ ಏಜೆನ್ಸಿ ಅಥವಾ ಕೋರ್ಟ್ ಮುಂದೆ ರುಜಿರಾ ಹಾಜರಾಗಿಲ್ಲ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿಕೆ ನೀಡಿದ ನಂತರ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧ ಸರ್ವರಿಯಾ ಈ ಆದೇಶ ಹೊರಡಿಸಿದರು. ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿತು.

ಪಶ್ಚಿಮ ಬಂಗಾಳದ ಕುನುಸ್ಟೋರಿಯಾ, ಕಜೋರಾ ಮತ್ತು ಅಸನ್ಸೋಲ್ ಸುತ್ತಮುತ್ತಲ ಪ್ರದೇಶಗಳಲ್ಲಿನ ಈಸ್ಟರ್ನ್ ಕೋಲ್‌ ಫೀಲ್ಡ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದಂತೆ ಬಹುಕೋಟಿ ಕಲ್ಲಿದ್ದಲು ಕಳ್ಳತನದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ 2020 ನವೆಂಬರ್ ನಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿದೆ.