ಹೊಸದಿಲ್ಲಿ: ಅವಸರವೇ ಅಪಘಾತಕ್ಕೆ ಕಾರಣ ಎಂದು ತಿಳಿದಿದ್ದರೂ ಕೆಲವರು ಕೈಯಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತ ರಸ್ತೆ ದಾಟುವುದು, ವೇಗವಾಗಿ ವಾಹನ ಚಲಾಯಿಸುವುದರ ಮೂಲಕ ಅವಾಂತರಗಳನ್ನು ಮಾಡುತ್ತಾರೆ. ತಮ್ಮ ಜೀವದ ಜತೆಗೆ ಇನ್ನೊಬ್ಬರ ಜೀವದ ಜತೆಗೂ ಆಟವಾಡುತ್ತಾರೆ. ಇತ್ತೀಚೆಗೆ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಸ್ಕೂಟರ್ ಚಲಾಯಿಸಿಕೊಂಡು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಹೋಗಿ ಟ್ರಕ್ ಮೇಲೆ ಬಿದ್ದಿದ್ದಾನೆ. ಅದೃಷ್ಟವಶಾತ್ ಆತನಿಗೆ ಯಾವುದೇ ಹಾನಿಯಾಗಲಿಲ್ಲ. ಆದರೆ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ದೃಶ್ಯವನ್ನು ನೋಡಿದರೆ ಯಾವುದೋ ಸಿನಿಮಾದ ಸ್ಟಂಟ್‌ನಂತೆ ಭಾಸವಾಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ 10 ಸೆಕೆಂಡುಗಳ ಈ ವಿಡಿಯೊದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸ್ಕೂಟರ್ ಸವಾರನು ನಿಯಂತ್ರಣ ಕಳೆದುಕೊಂಡು ಹಾರಿ ಹೋಗಿ ಚಲಿಸುತ್ತಿದ್ದ ಟ್ರಕ್‍ನ ಬಾನೆಟ್ ಮೇಲೆ ಬಿದ್ದಿದ್ದಾನೆ. ಇದರಿಂದ ಆತನಿಗೆ ಯಾವುದೇ ಹಾನಿಯಾಗದೇ ಟ್ರಕ್‍ನಿಂದ ಕೆಳಗೆ ಇಳಿದಿದ್ದಾನೆ. ಟ್ರಕ್ ಚಾಲಕ, ವ್ಯಕ್ತಿಯು ಗಾಳಿಯಲ್ಲಿ ಹಾರುವುದನ್ನು ನೋಡಿ, ತಕ್ಷಣ ಬ್ರೇಕ್ ಹಾಕಿದ್ದಾನೆ. ಇದರಿಂದ ಸ್ಕೂಟರ್ ಸವಾರನಿಗೆ ಯಾವುದೇ ಅಪಾಯ ಸಂಭವಿಸವಿಲ್ಲ. ಆದರೆ ಸ್ಕೂಟರ್ ಸವಾರನನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಗಿದೆ. ಯಾಕೆಂದರೆ ಆತ ಶಾಂತ ಚಿತ್ತದಿಂದ ಯಾವುದೇ ಭಯವಿಲ್ಲದೆ, ಟ್ರಕ್‍ನ ಬಾನೆಟ್‍ನಿಂದ ಇಳಿದು ಬಂದು ಅಲ್ಲಿ ಬಿದ್ದ ತನ್ನ ಸ್ಕೂಟರ್ ಅನ್ನು ಎತ್ತಲು ಹೋಗಿದ್ದಾನೆ. ಈ ವಿಡಿಯೊ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಹಲವರು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರು ಟ್ರಕ್ ಚಾಲಕನ ತ್ವರಿತ ಕ್ರಮ ಕಂಡು ಹೊಗಳಿದ್ದಾರೆ ಮತ್ತು ಸ್ಕೂಟರ್ ಸವಾರ ಹಾರಿ ಬಿದ್ದರೂ ಕೂಡ ಆತನಿಗೆ ಏನು ಆಗದಿರುವುದನ್ನು ಕಂಡು ಅನೇಕರು ಆಶ್ಚರ್ಯಗೊಂಡಿದ್ದಾರೆ.
This is not the shooting of Rohit Shetty's film!#RoadSafety pic.twitter.com/Y6nn01pg2k
— Surya Reddy (@jsuryareddy) November 29, 2024
ಇಂತಹ ಆಶ್ಚರ್ಯಕಾರಿ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮಧ್ಯಪ್ರದೇಶದ ಬೆತುಲ್‍ನಲ್ಲಿ ರಸ್ತೆಯ ಬಳಿ ಸೈಕಲ್‍ನಲ್ಲಿ ನಿಂತಿದ್ದ 5 ವರ್ಷದ ಬಾಲಕನಿಗೆ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಆ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಯುನೈಟೆಡ್ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಕನ ಹುಚ್ಚಾಟ! ವಿಡಿಯೊ ಇದೆ
ಈ ಘಟನೆಯ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರಿನ ಚಕ್ರವು ಬಾಲಕನ ಮೇಲೆ ಹರಿದ ನಂತರವೂ ಬಾಲಕನಿಗೆ ಯಾವುದೇ ಗಾಯಗಳಾಗದೆ ಸುರಕ್ಷಿತವಾಗಿದ್ದಾನೆ. ಈ ಬಾಲಕ ಸರಣ್ಶ್ ಯಾದವ್ ಎಂಬುದಾಗಿ ತಿಳಿದುಬಂದಿದ್ದು, ಅಪಘಾತ ಸಂಭವಿಸುವ ಮೊದಲು ಬಾಲಕ ಮನೆಯ ಮುಂದೆ ಸೈಕಲ್‌ನಲ್ಲಿ ಆಡುತ್ತಿದ್ದನಂತೆ. ಆದರೆ ಇದ್ದಕ್ಕಿದ್ದಂತೆ ಸೈಕಲ್‍ನಲ್ಲಿ ಏನೋ ಸಮಸ್ಯೆಯಾದ ಕಾರಣ ಆತ ನಡುರಸ್ತೆಯಲ್ಲಿ ನಿಂತುಕೊಂಡು ಸೈಕಲ್ ಅನ್ನು ಪೆಡಲ್ ಮಾಡಲು ಪ್ರಯತ್ನಿಸಿದ್ದಾನಂತೆ. ಈ ಸಮಯದಲ್ಲಿ ಅವನ ಹಿಂದಿನಿಂದ ಬಂದ ಕಾರು ಆತನ ಮೇಲೆ ಹರಿದಿದೆ. ಅದೃಷ್ಟವಶಾತ್ ಕಾರು ಅವನ ಮೇಲೆ ಹರಿದರೂ ಬಾಲಕ ಗಾಯಗೊಳ್ಳದೆ ಎದ್ದು ನಿಂತಿದ್ದಾನೆ. ಇದನ್ನು ಕಂಡು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.