ಬೆಂಗಳೂರು: ಒಡಿಶಾ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡ ಅಮೆರಿಕನ್ ಮಹಿಳೆ ಹಂಚಿಕೊಂಡಿರುವ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಹನ್ನಾ ಎಂಬ ಅಮೆರಿಕನ್ ಮಹಿಳೆ ಮದುವೆಯಾದ ನಂತರ ತಮ್ಮ ಜೀವನವು ಹೇಗೆ ಬದಲಾಯಿತು ಎಂಬುದರ ಕುರಿತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಇವರ ಮಾತುಗಳಿಗೆ ಆಕರ್ಷಿತರಾಗಿದ್ದಾರೆ.
“ಒಡಿಯಾ ವ್ಯಕ್ತಿಯನ್ನು ಮದುವೆಯಾದ ನಂತರ ನನ್ನ ಜೀವನ ಹೇಗೆ ಬದಲಾಯಿತು” ಎಂಬ ಶೀರ್ಷಿಕೆಯ ಈ ವಿಡಿಯೊದಲ್ಲಿ ಹೊಸ ಸಂಸ್ಕೃತಿ ಮತ್ತು ಕುಟುಂಬದ ಸಂಪ್ರದಾಯವನ್ನು ಅಳವಡಿಸಿಕೊಳ್ಳುವ ಬಗ್ಗೆ ಹನ್ನಾ ಅವರು ಈ ವಿಡಿಯೊ ಮೂಲಕ ತಿಳಿಸಿದ್ದಾರೆ. “ನಾನು ಒಡಿಯಾ ಕುಟುಂಬದ ಸದಸ್ಯೆ. ನಾವು ಒಟ್ಟಿಗೆ ಇದ್ದಾಗಲೆಲ್ಲಾ, ನಾವು ಪ್ರೀತಿ, ನಗು, ಆಹಾರ ಮತ್ತು ಕಥೆಗಳನ್ನು ಹಂಚಿಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ. ವಿಡಿಯೊದಲ್ಲಿ ಅವರ ಅತ್ತೆ-ಮಾವಂದಿರು ಅವರ ಮೇಲೆ ತೋರುವ ಆತ್ಮೀಯತೆ ದೃಶ್ಯಗಳು ಸೆರೆಯಾಗಿವೆ.
“ಪ್ರತಿಯೊಬ್ಬ ಸೊಸೆಗೂ ಅಂತಹ ಪ್ರೀತಿಯ ಪೋಷಕರು ಇರಬೇಕೆಂದು ನಾನು ಬಯಸುತ್ತೇನೆ” ಎಂದು ಹನ್ನಾ ತನ್ನ ವಿಡಿಯೊ ಪೋಸ್ಟ್‌ನ ಶೀರ್ಷಿಕೆಯಲ್ಲಿ ಅಂತಹ ಕಾಳಜಿಯ ಕುಟುಂಬದ ಭಾಗವಾಗಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
“ಸಹಜವಾಗಿ, ಮದುವೆಯಾದ ನಂತರ ನನ್ನ ಜೀವನವು ಸಾಕಷ್ಟು ಬದಲಾಗಿದೆ. ಆದರೆ ಅವರ ಪ್ರೀತಿಯ ಕುಟುಂಬದ ಭಾಗವಾಗಿರುವುದು ನಿಜಕ್ಕೂ ಖುಷಿಯ ವಿಚಾರ. ಪ್ರತಿಯೊಬ್ಬ ಸೊಸೆಯೂ ನನ್ನಷ್ಟು ಅದೃಷ್ಟಶಾಲಿಯಲ್ಲ ಎಂದು ನನಗೆ ತಿಳಿದಿದೆ. ನಮ್ಮ ಹಿನ್ನೆಲೆ ಮತ್ತು ಸಂಸ್ಕೃತಿಗಳು ತುಂಬಾ ಭಿನ್ನವಾಗಿದ್ದರೂ, ಈ ಇಬ್ಬರು ನಿಸ್ವಾರ್ಥವಾಗಿ ಪ್ರೀತಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ಇನ್‌ಸ್ಟಾಗ್ರಾಂನಲ್ಲಿ ಭೇಟಿಯಾದ 16 ವರ್ಷದ ಬಾಲಕನೊಂದಿಗೆ ಓಡಿಹೋದ 10 ವರ್ಷದ ಬಾಲಕಿ
ಹನ್ನಾ ಅವರ ವಿಡಿಯೊ ಸೋಶಿಯಲ್ ಮೀಡಿಯಾ ಬಳಕೆದಾರರನ್ನು ಮೋಡಿ ಮಾಡಿದೆ. ಆರೋಗ್ಯಕರ ಸಂಬಂಧಕ್ಕೆ ಹೆಚ್ಚಿನ ಪ್ರೀತಿ, ತಿಳುವಳಿಕೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯ ಅಗತ್ಯವಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನೊಬ್ಬರು “ಗೌರವ, ಪ್ರೀತಿ, ಕಾಳಜಿ, ಮೆಚ್ಚುಗೆ, ಒಳ್ಳೆಯದನ್ನು ವಿನಿಮಯ ಮಾಡಿಕೊಳ್ಳುವುದು ಜೀವನವನ್ನು ಯೋಗ್ಯವಾಗಿಸುವ ಶ್ರೇಷ್ಠ ಮೌಲ್ಯಗಳಾಗಿವೆ” ಎಂದು ಹೇಳಿದ್ದಾರೆ.