Saturday, 10th May 2025

Viral Video: ಮನಮೋಹನ್‌ ಸಿಂಗ್‌ ನಿಧನ ವಾರ್ತೆ ಓದುವ ಭರದಲ್ಲಿ ಯಡವಟ್ಟು; ಮಾಜಿ ಪ್ರಧಾನಿ ಬದಲು ಮೋದಿಯ ಹೆಸರು ಹೇಳಿದ ಟಿವಿ ನಿರೂಪಕಿ

Viral Video

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (Manmohan Singh) ಅವರು ಡಿ. 26ರಂದು ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಶನಿವಾರ (ಡಿ. 28) ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ಮಧ್ಯೆ ಮನಮೋಹನ್‌ ಸಿಂಗ್‌ ಅವರ ನಿಧನ ಸುದ್ದಿಯನ್ನು ಓದುವ ಭರದಲ್ಲಿ ಹಿಂದಿ ವಾಹಿನಿಯೊಂದರ ನಿರೂಪಕಿ ಹಾಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹೆಸರು ಹೇಳಿ ಯಡವಟ್ಟು ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಆಜ್‌ ತಕ್‌ (Aaj Tak) ವಾಹಿನಿಯ ಪ್ರೈಂ ಟೈಮ್‌ ಆ್ಯಂಕರ್‌ ಈ ರೀತಿಯ ಯಡವಟ್ಟು ಮಾಡಿ ಸದ್ಯ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಗುರುವಾರ ರಾತ್ರಿ ಮನಮೋಹನ್‌ ಸಿಂಗ್‌ ಅವರ ನಿಧನ ವಾರ್ತೆ ಓದುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿರುವ ಈ ವಿಡಿಯೊ ವೈರಲ್‌ ಆಗಿದೆ. ಸದ್ಯ ಈ ವಿಡಿಯೊವನ್ನು ನೆಟ್ಟಿಗರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊ‍ಳ್ಳುತ್ತಿದ್ದಾರೆ.

ವೈರಲ್‌ ವಿಡಿಯೊದಲ್ಲಿ ಏನಿದೆ?

ಮನಮೋಹನ್‌ ಸಿಂಗ್‌ ಅವರು ದಾಖಲಾಗಿದ್ದ ದಿಲ್ಲಿಯ ಏಮ್ಸ್‌ ಆಸ್ಪತ್ರೆಯ ಪ್ರೆಸ್‌ ನೋಟ್‌ ಅನ್ನು ಉಲ್ಲೇಖಿಸಿ ಮಾತನಾಡಿದ ನಿರೂಪಕಿ ಬಾಯ್ತಪ್ಪಿ ಮೋದಿ ಹೆಸರು ಹೇಳಿದ್ದಾರೆ. ʼʼಏಮ್ಸ್‌ ಆಸ್ಪತ್ರೆ ರಿಲೀಸ್‌ ಮಾಡಿರುವ ಪ್ರೆಸ್‌ ನೋಟ್‌ ಅನ್ನು ಇದೀಗ ನಾವು ತೋರಿಸುತ್ತಿದ್ದೇವೆ. ಇದರಲ್ಲಿ 92 ವರ್ಷದ ಪ್ರಧಾನ ಮಂತ್ರಿ ನರೇಂದ್ರ ಮೋದಿ-ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನ ಹೊಂದಿರುವುದನ್ನು ದೃಢಪಡಿಸಲಾಗಿದೆʼʼ ಎಂದು ಹೇಳಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಬಾಯ್ತಪ್ಪಿ ಮೋದಿ ಹೆಸರು ಹೇಳಿದ ಅವರು ಕೂಡಲೇ ತಪ್ಪನ್ನು ತಿದ್ದಿಕೊಂಡಿರುವುದು ವಿಡಿಯೊದಲ್ಲಿ ಕಾಣಬಹುದು. ಸದ್ಯ ಈ ವಿಡಿಯೊವನ್ನು ಇಟ್ಟುಕೊಂಡು ಟ್ರೋಲಿಗರು ಬಗೆ ಬಗೆಯ ಮೀಮ್ಸ್‌ ತಯಾರಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.

ಈ ವಿಡಿಯೊ ಇದೀಗ ಭಾರೀ ಸಂಚಲನ ಸೃಷ್ಟಿಸಿದೆ. ಹಲವರು ಆಜ್‌ ತಕ್‌ ಚಾನಲ್‌ಗೆ ಮತ್ತು ನಿರೂಪಕಿಗೆ ಸರಿಯಾಗಿಯೇ ಬೈದಿದ್ದಾರೆ. ನ್ಯೂಸ್‌ ಬ್ರೇಕ್‌ ಮಾಡುವ ಭರದಲ್ಲಿ ಇಂತಹ ಅಸಂಬದ್ಧ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಇನ್ನು ಕೆಲವರು ʼʼಆರ್‌ಐಪಿ ಆಜ್‌ ತಕ್‌ʼʼ ಎಂದು ಕಾಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

ಇದು ಮೊದಲ ಬಾರಿ ಏನಲ್ಲ

ಅಂದಹಾಗೆ ಈ ನಿರೂಪಕಿ ಯಡವಟ್ಟು ಮಾಡಿಕೊಂಡಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆ ಕೇಂದ್ರ ಸರ್ಕಾರ 1 ಸಾವಿರ ರೂ. ನೋಟ್‌ ನಿಷೇಧಿಸಿದಾಗಲೂ ಈ ನಿರೂಪಕಿ ಯಡವಟ್ಟು ಮಾಡಿಕೊಂಡಿದ್ದರು. 2,000 ರೂ.ಗಳ ನೋಟುಗಳನ್ನು ಪತ್ತೆಹಚ್ಚಲು ಇದರಲ್ಲಿ ಚಿಪ್ ಅಳವಡಿಸಲಾಗಿದೆ ಎಂದು ಹೇಳುವ ಮೂಲಕ ಟ್ರೋಲ್‌ಗೆ ಗುರಿಯಾಗಿದ್ದರು. ಈ ಹೇಳಿಕೆಯನ್ನು ನೀಡಿದ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಝಾಡಿಸಿದ್ದರು. ಇದೀಗ ಮತ್ತೊಮ್ಮೆ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Manmohan Singh: ಶನಿವಾರ ರಾಜ್‌ಘಾಟ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅಂತ್ಯಕ್ರಿಯೆ