Wednesday, 14th May 2025

Viral Video: ಸುಪ್ರೀಂ ಕೋರ್ಟ್‌ನಲ್ಲಿ ವಕೀಲರ ಬ್ಯಾಗನ್ನೇ ಎಗರಿಸಿದ ಕಳ್ಳ! ವಿಡಿಯೊ ನೋಡಿ

Viral Video

ನವದೆಹಲಿ: ಜನರಿಗೆ ನ್ಯಾಯ ಒದಗಿಸುವ ನ್ಯಾಯದೇಗುಲವಾದ ಸುಪ್ರೀಂ ಕೋರ್ಟ್‍ನ ಆವರಣದಲ್ಲಿ ಹಾಡಹಗಲಿನಲ್ಲೇ ಕಳ್ಳತನ ನಡೆದಿದೆ. ಸುಪ್ರೀಂ ಕೋರ್ಟ್‍ನ ಕಾರಿಡಾರ್‌ಗೆ ನುಗ್ಗಿದ ಕೋತಿಯೊಂದು ವಕೀಲರೊಬ್ಬರ ಲಂಚ್ ಬ್ಯಾಗ್‍ ಅನ್ನು ಕದ್ದೊಯ್ದಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‍ನ ಆವರಣದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಎರಡು ಕೋತಿಗಳು ಆವರಣಕ್ಕೆ ನುಗ್ಗಿ ವಕೀಲರ ಬ್ಯಾಗ್ ಮತ್ತು ಲಂಚ್ ಬಾಕ್ಸ್ ಕದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ಈ ವಿಡಿಯೊವನ್ನು ಹಂಚಿಕೊಂಡಿದ್ದು,  ವಿಡಿಯೊದಲ್ಲಿ, ಕೋತಿಗಳಲ್ಲಿ ಒಂದು ನ್ಯಾಯಾಲಯದ ಪ್ರವೇಶದ್ವಾರದ ಬಳಿಯ ಶೆಲ್ಪ್‌ಗೆ ಹಾರಿ ವಕೀಲರೊಬ್ಬರ ಲಂಚ್‍ ಬ್ಯಾಗ್‍ ಅನ್ನು ಎಗರಿಸಿಕೊಂಡು ಹೋಗಿದೆ.  ನಂತರ ಅದು ಒಂದು ಕಡೆ ಕುಳಿತು ತಿನ್ನಲು ಏನಾದರೂ ಸಿಗಬಹುದೇ ಎಂದು ಬ್ಯಾಗ್ ಅನ್ನು ಹುಡುಕಾಡಿದೆ. ಈ ತಮಾಷೆಯ ಪ್ರಕರಣವನ್ನು ವಕೀಲರೆಲ್ಲರೂ ನೋಡುತ್ತಿರುವುದನ್ನು ಕಂಡ ಕೋತಿ ಕೊನೆಗೆ ಬ್ಯಾಗ್‍ ಅನ್ನು ಹರಿದು ಹಾಕಿ ಹಾರಿ ಹೋಗಿದೆ.

ಇದನ್ನೂ ಓದಿ: ಬಸ್‍ನಲ್ಲಿ ಕುಳಿತ ವ್ಯಕ್ತಿ ಮತ್ತೆ ಮೇಲೇಳಲೇ ಇಲ್ಲ; ಈ ಸಾವೆಷ್ಟು ನಿಷ್ಕರುಣಿ!

ಕೋತಿ ಬ್ಯಾಗ್‍ನಿಂದ ಲಂಚ್‍ ಬಾಕ್ಸ್ ಅನ್ನು ಹೊರಗೆ ತೆಗೆದು ಅದು ಖಾಲಿ ಇರುವುದನ್ನು ಕಂಡು ಹೊರಗೆ ಎಸೆದಿದೆ. ಕೆಲವು ವೀಕ್ಷಕರು ಈ ದೃಶ್ಯವನ್ನು ತಮ್ಮ ಫೋನ್‍ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ.  ಅಕ್ಟೋಬರ್ 5ರಂದು ಹಂಚಿಕೊಳ್ಳಲಾದ ಈ ಕ್ಲಿಪ್ ನಂತರ ವೈರಲ್ ಆಗಿದ್ದು, ಅನೇಕರು ಇದಕ್ಕೆ ತಮಾಷೆಯಾಗಿ ನಾನಾ ಬಗೆಯಲ್ಲಿ ಕಮೆಂಟ್  ಮಾಡಿದ್ದಾರೆ.