Monday, 19th May 2025

Viral Video: ಗೋಡೆಗೆ ಡಿಕ್ಕಿ ಹೊಡೆದ ಟೆಂಪೋ; ಸಿಕ್ಕಿದ್ದೇ ಛಾನ್ಸು ಎಂದು ಮೀನು ದೋಚಿದ ಜನ-ವಿಡಿಯೊ ಇದೆ

Viral Video

ಉತ್ತರಪ್ರದೇಶ: ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಮೀನು ತುಂಬಿದ ಟೆಂಪೋ ಅಂಗಡಿಯೊಂದರ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೀನು ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದ್ದು, ಸ್ಥಳೀಯ ನಿವಾಸಿಗಳು ರಸ್ತೆ ಮಧ್ಯದಲ್ಲಿ ಬಿದ್ದ ಮೀನುಗಳನ್ನು ಆಯುವುದರಲ್ಲೇ ನಿರತರಾಗಿದ್ದರಂತೆ. ಈ ಘಟನೆ  ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಮೋಹನಾ ಪೊಲೀಸ್ ಠಾಣೆ ವ್ಯಾಪ್ತಿಯ ದಫ್ಲಿಪುರ್ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಪಂಪ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಇಬ್ಬರು ವ್ಯಕ್ತಿಗಳು ಪೆಟ್ರೋಲ್ ಪಂಪ್‍ನಲ್ಲಿ ಕುರ್ಚಿಗಳ ಮೇಲೆ ಕುಳಿತಿದ್ದ ವೇಳೆ ಇದ್ದಕ್ಕಿದ್ದಂತೆ, ವೇಗವಾಗಿ ಬಂದ ಟೆಂಪೋವೊಂದು ಗೋಡೆಗೆ ಡಿಕ್ಕಿ ಹೊಡೆದಿದೆ. ಆ ಟೆಂಪೋ ಮೀನುಗಳಿಂದ ತುಂಬಿದ್ದ ಕಾರಣ ಡಿಕ್ಕಿ ಹೊಡೆದ ರಭಸಕ್ಕೆ  ಟೆಂಪೋದಲ್ಲಿದ್ದ ಮೀನುಗಳೆಲ್ಲಾ ನೆಲಕ್ಕೆ ಬಿದ್ದಿವೆಯಂತೆ. ರಸ್ತೆಯಲ್ಲಿ ಹೋಗುತ್ತಿದ್ದ ಜನರು ಚಾಲಕನಿಗೆ ಸಹಾಯ ಮಾಡುವ ಬದಲು ಮೀನುಗಳನ್ನು ತೆಗೆದುಕೊಳ್ಳುವುದಕ್ಕೆ ಮುಗಿಬಿದ್ದಿದ್ದಾರಂತೆ.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಜನರು ಈ ವಿಡಿಯೊಗೆ  ಲೈಕ್ ಮಾಡಿದ್ದಾರೆ. ಹಲವರು ಈ ವಿಡಿಯೊ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಯಾರದೋ ವಿಪತ್ತು, ಯಾರಿಗೋ ಅವಕಾಶ’ ಎಂದು ಬರೆದಿದ್ದಾರೆ.

ಇದನ್ನೂ ಓದಿ:ಪೈಲಟ್‌ನ ಹೃದಯಸ್ಪರ್ಶಿ ಮಾತು ಫುಲ್‌ ವೈರಲ್; ಅಷ್ಟಕ್ಕೂ ಈ ವಿಡಿಯೊ ಎಲ್ಲರ ಗಮನ ಸೆಳೆದಿದ್ದೇಕೆ?

ಮೂಲಗಳ ಪ್ರಕಾರ, ಟೆಂಪೋ ಟ್ರಕ್ ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ನಿಯಂತ್ರಣ ಕಳೆದುಕೊಂಡಿದೆ. ಅದು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು  ಅಂಗಡಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬುಟ್ಟಿಗಳಲ್ಲಿ ಇರಿಸಲಾಗಿದ್ದ ಮೀನು ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.  ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಪೊಲೀಸರು ಈಗ ಅದರ ತನಿಖೆ ಮಾಡಿದ್ದಾರೆ. ಚಾಲಕನನ್ನು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ವೇಗದಿಂದಾಗಿ ಟೆಂಪೋ ನಿಯಂತ್ರಣ ತಪ್ಪಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.