ನವದೆಹಲಿ: ಇಲ್ಲಿನ ಪಶ್ಚಿಮ ದೆಹಲಿಯಲ್ಲಿರುವ (Delhi) ರಜೌರಿ ಗಾರ್ಡನ್ ಮೆಟ್ರೋ ಸ್ಟೇಷನ್ (Rajouri Garden Metro Station) ಬಳಿ ಇರುವ ರೆಸ್ಟೋರೆಂಟ್ ಒಂದರಲ್ಲಿ ಡಿ.09ರಂದು ಅಗ್ನಿ ಅವಘಡ (Fire Accident) ಸಂಭವಿಸಿದೆ. ಈ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಲು ರೆಸ್ಟೋರೆಂಟ್ ನಲ್ಲಿದ್ದ ಹಲವು ವಿದ್ಯಾರ್ಥಿಗಳು ಆ ಕಟ್ಟಡದಿಂದ ಹೊರ ಜಿಗಿದಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಘಟನೆಯಲ್ಲಿ ಒಬ್ಬನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿನ ರಜೌರಿ ಗಾರ್ಡನ್ ಮೆಟ್ರೋ ಸ್ಟೇಷನ್ ಬಳಿ ಕಾರ್ಯಾಚರಿಸುತ್ತಿರುವ ಜಂಗಲ್ ಜಾಂಬೂರಿ ರೆಸ್ಟೋರೆಂಟ್ ನಲ್ಲಿ (Jungle Jamboree Restaurant) ಬೆಂಕಿ ಹತ್ತಿಕೊಂಡಿದೆ ಎಂಬ ಮಾಹಿತಿ ನಮಗೆ ಸೋಮವಾರ ಮಧ್ಯಾಹ್ನ 2.01 ಗಂಟೆ ಹೊತ್ತಿಗೆ ಲಭಿಸಿತು. ತಕ್ಷಣವೇ ಘಟನಾ ಸ್ಥಳಕ್ಕೆ 10 ಅಗ್ನಿಶಾಮಕ ದಳದ ವಾಹನಗಳು ಧಾವಿಸಿ ಬೆಂಕಿಯನ್ನು ನಿಯಂತ್ರಿಸುವ ಕಾರ್ಯವನ್ನು ಮಾಡಿದೆವು” ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್ ಗರ್ಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಮತ್ತು ಈ ದುರ್ಘಟನೆಗೆ ಕಾರಣವೇನೆಂಬುದು ಇನ್ನೂ ಕೂಡ ತಿಳಿದುಬಂದಿಲ್ಲ ಎಂದು ಗರ್ಗ್ ಹೇಳಿದ್ದಾರೆ. ಅಗ್ನಿ ಅವಘಡದ ಕಾರಣದಿಂದ ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಈ ವಿಡಿಯೋಗಳಲ್ಲಿರುವಂತೆ ರೆಸ್ಟೋರೆಂಟ್ ಒಳಗಿದ್ದವರು ತಮ್ಮನ್ನು ರಕ್ಷಿಸಿಕೊಳ್ಳಲು ಕಟ್ಟಡದಿಂದ ಪಕ್ಕದ ಕಟ್ಟಡದ ಟೆರೇಸಿಗೆ ಜಿಗಿಯುತ್ತಿರುವ ದೃಶ್ಯಗಳಿವೆ.
ಈ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ರೆಸ್ಟೋರೆಂಟ್ ಒಳಗೆ 20ಕ್ಕಿಂತಲೂ ಹೆಚ್ಚು ಜನರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. “ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ಹಲವಾರು ಅಂಗಡಿ ಮಾಲಕರು ದಟ್ಟ ಹೊಗೆಯನ್ನು ನೋಡಿದರು, ಮತ್ತೆ ನೊಡಿದಾಗ ಈ ಹೊಗೆ ಜಂಗಲ್ ಜಾಂಬೂರಿ ರೆಸ್ಟೋರೆಂಟ್ ನಿಂದ ಬರುತ್ತಿರುವುದು ಗೊತ್ತಾಯಿತು. ನಾವು ತಕ್ಷಣವೇ ಪೊಲಿಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆವು. ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಜನರು ರೆಸ್ಟೋರೆಂಟ್ ಒಳಭಾಗದಿಂದ ಸಮೀಪದ ಕಟ್ಟಡದ ಟೆರೇಸ್ ಗೆ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ’ ಎಂದು ಹತ್ತಿರದ ಅಂಗಡಿ ಮಾಲಕ ಘನಶ್ಯಾಮ್ ಅಗರ್ವಾಲ್ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Sunny Leone: ಬೆಂಗಳೂರಿನಲ್ಲಿ ಕುಣಿದು, ಕುಣಿಸಿದ ಶೇಷಮ್ಮ; IGNITE ಸೂಪರ್ ಕ್ಲಬ್‌ನಲ್ಲಿ ಸನ್ನಿ ಲಿಯೋನ್ ಡಿಜೆ ಪಾರ್ಟಿ ಜೋರು
ಅಗ್ನಿ ಅವಘಡ ಸಂಭವಿಸಿದ ಈ ಕಟ್ಟಡದ ತಳ ಮಹಡಿಯಲ್ಲಿ ಹಲವಾರು ಅಂಗಡಿಗಳಿದ್ದು, ಜಂಗಲ್ ಜಾಂಬೂರಿ ಹೆಸರಿನ ಈ ರೆಸ್ಟೋರೆಂಟ್ ಹಾಗೂ ಎಂ.ಎ.ಎ.ಸಿ. ರಜೌರಿ ಎಂಬ ಹೆಸರಿನ ಸಂಸ್ಥೆ ಇನ್ನೊಂದು ಮಹಡಿಯಲ್ಲಿ ಕಾರ್ಯಾಚರಿಸುತ್ತಿತ್ತು ಎಂದು ದೆಹಲಿ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಟ್ಟಡದ ತಳಮಹಡಿಯಲ್ಲಿ ಬೆಂಕಿಯಿಂದ ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಕಾರ್ಯಾರಿಸಿದ್ದಾರೆ ಮತ್ತು ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.