Saturday, 17th May 2025

Viral Video: ಬೆಲ್ಟ್‌ನಿಂದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಕೋಚಿಂಗ್‌ ಸೆಂಟರ್‌ ಸ್ಥಾಪಕ; ವಿಡಿಯೊ ನೋಡಿ

Viral Video

ಆಂಧ್ರಪ್ರದೇಶ: ಆಂಧ್ರ ಪ್ರದೇಶದ ಪ್ರೈವೇಟ್ ಕೋಚಿಂಗ್ ಸಂಸ್ಥೆಯ ಸ್ಥಾಪಕರೊಬ್ಬರು ವಿದ್ಯಾರ್ಥಿಯೊಬ್ಬನಿಗೆ ಹೊಡೆದ ಹಳೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್‌ (Viral Video) ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೊದಲ್ಲಿ “ಇಂಡಿಯನ್ ಆರ್ಮಿ ಕಾಲಿಂಗ್” ಎಂಬ ಪ್ರೈವೇಟ್ ಕೋಚಿಂಗ್ ಸಂಸ್ಥೆಯ ಸ್ಥಾಪಕ ಬಸವ ವೆಂಕಟ ರಮಣ ಎಂಬಾತ ಬೆಲ್ಟ್‌ನಿಂದ ವಿದ್ಯಾರ್ಥಿಯೊಬ್ಬನನ್ನು ಹೊಡೆದಿದ್ದಾನೆ. ವಿದ್ಯಾರ್ಥಿಯು ಕಣ್ಣೀರು ಹಾಕುತ್ತಾ ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಕಪ್ಪು ಟೀಶರ್ಟ್ ಧರಿಸಿರುವ ಇನ್ನೊಬ್ಬ ವ್ಯಕ್ತಿಯು  ಹಿಂದೆ ನಿಂತು ಆ ವ್ಯಕ್ತಿ  ವಿದ್ಯಾರ್ಥಿಯನ್ನು ಹೊಡೆಯುವ ದೃಶ್ಯವನ್ನು ನೋಡುತ್ತಾ ನಿಂತಿದ್ದಾನೆ. ಈ ಘಟನೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪುತ್ರರಾದ ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಸಚಿವ ನಾರಾ ಲೋಕೇಶ್ ಅವರು ಈ ಆಕ್ರಮಣಕಾರಿ ಕೃತ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. “ಕಾರಣ ಏನೇ ಇರಲಿ, ಇಂತಹ ಆಕ್ರಮಣಕಾರಿ ಕೃತ್ಯಗಳು ಅನಗತ್ಯ. ರಾಜ್ಯ ಮತ್ತು ಶ್ರೀಕಾಕುಳಂ ಜಿಲ್ಲಾ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ” ಎಂದು ಅವರು ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸರು, ಸಂತ್ರಸ್ತರ ಹೇಳಿಕೆಯನ್ನು ದಾಖಲಿಸಿದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. “ವೈರಲ್ ಆಗಿರುವ ವಿಡಿಯೊದಲ್ಲಿ 2023ರ ಡಿಸೆಂಬರ್‌ನಲ್ಲಿ ಶ್ರೀಕಾಕುಳಂ ಜಿಲ್ಲೆಯ ಜಲುಮುರುವಿನ ಶ್ರೀಮುಖಲಿಂಗಂ ಬಸವ ವೆಂಕಟ ರಮಣ ಅವರ ಪ್ರೈವೇಟ್ ಕೋಚಿಂಗ್ ಸಂಸ್ಥೆಯಾದ ಇಂಡಿಯನ್ ಆರ್ಮಿ ಕಾಲಿಂಗ್ (ಐಎಸಿ)ನಲ್ಲಿ ವಿದ್ಯಾರ್ಥಿಗಳನ್ನು ಥಳಿಸುತ್ತಿರುವುದು ಕಂಡುಬಂದಿದೆ. ವಿಡಿಯೊದಲ್ಲಿ ಕಾಣಿಸಿಕೊಂಡಿರುವ ವಿದ್ಯಾರ್ಥಿಯನ್ನು ಗುರುತಿಸಲಾಗಿದ್ದು, ಅವರ ಹೇಳಿಕೆಯನ್ನು ಪಡೆಯಲು ತಂಡವನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗುವುದುʼʼ ಎಂದು ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ರಮಣ ಅವರು ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಅವರ ಸಹವರ್ತಿ ಎಂದು ಪ್ರತಿಪಕ್ಷ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್ಆರ್‌ಸಿಪಿ) ಆರೋಪಿಸಿದೆ. ಈ ಕೋಚಿಂಗ್ ಸಂಸ್ಥೆಯ ಸ್ಥಾಪಕರು ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವಿದ್ಯಾರ್ಥಿಗಳಿಂದ 5 ಲಕ್ಷದಿಂದ 10 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ಪಕ್ಷ ಹೇಳಿದೆ.  

ಆರೋಪಿಗಳು ಮಹಿಳೆಯರ ಕೋಣೆಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟಿದ್ದಾರೆ ಮತ್ತು ವಿಡಿಯೊಗಳನ್ನು ಬ್ಲಾಕ್‌ಮೇಲ್‌ ಮತ್ತು ಕಿರುಕುಳಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ವಿರೋಧ ಪಕ್ಷ ಆರೋಪಿಸಿದೆ.

ಅಲ್ಲದೇ ನಾಲ್ವರು ಯುವಕರು ಅದನ್ನು ಬಹಿರಂಗಪಡಿಸಲು ಪ್ರಯತ್ನಿಸಿದಾಗ, ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ. ಸ್ಥಳೀಯ ಶಾಸಕ ಗುಂಡು ಶಂಕರ್ ಅವರೊಂದಿಗಿನ ರಾಜಕೀಯ ಸಂಪರ್ಕವನ್ನು ಬಳಸಿಕೊಂಡು, ರಮಣ ಅವರು ಬೆದರಿಕೆಗಳನ್ನು ಹಾಕಿ ಮಾಲ್‍ಗಳನ್ನು ಸುಲಿಗೆ ಮಾಡಿದ್ದಾರೆ. ಈ ಆಘಾತಕಾರಿ ಪ್ರಕರಣವು ಅಂತಹ ಜನರನ್ನು ನಿಗ್ರಹಿಸುವಲ್ಲಿ ಸಮ್ಮಿಶ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ, ಇದು ಸಾರ್ವಜನಿಕ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳುತ್ತದೆ” ಎಂದು ವೈಎಸ್ಆರ್‌ಸಿಪಿ ಬರೆದಿದೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಸೆಕ್ಯುರಿಟಿ ಗಾರ್ಡ್‍ಗೆ ಕಪಾಳ ಮೋಕ್ಷ ಮಾಡಿದ ವ್ಯಕ್ತಿಗೆ ಕೊನೆಗೆ ಆಗಿದ್ದೇನು?

ಹಾಗಾಗಿ ರಮಣ ವಿರುದ್ಧದ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.